ADVERTISEMENT

ಬಿಜೆಪಿಯವರು ಮೆಂಟಲ್‌ ಗಿರಾಕಿಗಳು: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 17:41 IST
Last Updated 17 ನವೆಂಬರ್ 2021, 17:41 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಬಿಜೆಪಿಯವರು ಮೆಂಟಲ್ ಗಿರಾಕಿಗಳು. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು? ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಎತ್ತಿಹಾಕಿ, ಸ್ವಚ್ಛಗೊಳಿಸಿಕೊಳ್ಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದೆ ಎಂಬ ಬಿಜೆಪಿ ಟೀಕೆ ಕುರಿತು ಬುಧವಾರ ಪ್ರತಿಕ್ರಿಯಿಸಿದ ಅವರು, ‘ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕಾರಣದಿಂದ ಸಿದ್ದರಾಮಯ್ಯ ಅವರು ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಚಿಕ್ಕದಾಗಿ ಭಾಷಣ ಮಾಡಿದರು. ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಏನೇನೋ ಹೇಳಿದರೆ ಉತ್ತರ ಕೊಡಲಾಗದು. ಮುಖ್ಯಮಂತ್ರಿ ಮಾತನಾಡಿದರೆ ಉತ್ತರಿಸುತ್ತೇನೆ’ ಎಂದರು.

‘ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರ ಮೇಲೆ ನಿಗಾ ಇಡುವುದು, ನಿಯಂತ್ರಿಸುವುದು ತಪ್ಪೇನೂ ಅಲ್ಲ. ಪಕ್ಷದ ಕಾರ್ಯಕರ್ತರು ಮನೆಯ ಮಕ್ಕಳಿದ್ದಂತೆ. ಬೈದರೂ ಪ್ರೀತಿಯಿಂದ ನೋಡುತ್ತಾರೆ, ಗದರಿದರೂ ಪ್ರೀತಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಮಂಗಳವಾರದ ಕಾರ್ಯಕ್ರಮಕ್ಕೆ ಶಾಸಕ ಜಮೀರ್‌ ಅಹಮ್ಮದ್ ಖಾನ್‌ ಗೈರಾಗಿದ್ದ ಕುರಿತು ಕೇಳಿದಾಗ, ‘ಅವರು ದೆಹಲಿಯಲ್ಲಿದ್ದರು. ಅವರೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಬೆಂಬಲಿಗರು ಇರುತ್ತಾರೆ. ಜಮೀರ್‌ ಅವರಿಗೂ ಇದ್ದಾರೆ. ಅವರು ಗೈರಾಗಿದ್ದನ್ನು ಬೇರೆ ರೀತಿ ಅರ್ಥೈಸಲು ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.