
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪಕ್ಷದ ವತಿಯಿಂದ ರಚಿಸಿರುವ ಉಸ್ತುವಾರಿ ಸಮಿತಿಗೆ ತಮ್ಮನ್ನು ಪರಿಗಣಿಸದೇ ಇರುವ ಬಗ್ಗೆ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನನ್ನು ಎಲ್ಲೆ ಬಿಟ್ಟರೂ ಸಂಘಟನೆ ಮಾಡುವ ಶಕ್ತಿ ಇದೆ. ಬೆಂಗಳೂರು ಗೆದ್ದರೆ ಇಡೀ ರಾಜ್ಯ ಗೆದ್ದಂತೆಯೇ ಸರಿ’ ಎಂದು ಹೇಳಿದರು.
‘ಜಿಬಿಎ ಉಸ್ತುವಾರಿ ಸಮಿತಿ ರಚನೆ ಮಾಡುವಾಗ ನನ್ನನ್ನು ಪರಿಗಣಿಸದೇ ನನ್ನನ್ನು ಯಲಹಂಕಕ್ಕೆ ಸೀಮಿತ ಮಾಡಿದ್ದಾರೆ. 47 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ನಂದೀಶ್ ರೆಡ್ಡಿ ಕೊಟ್ಟ ಪಟ್ಟಿಗೆ ಸಹಿ ಮಾಡಿದ್ದಾರಂತೆ. ವಿಜಯೇಂದ್ರ ಅವರಿಗೆ ಬೆಂಗಳೂರಿನ ಮೇಲೆ ಹಿಡಿತ ಇಲ್ಲ’ ಎಂದರು.
‘ಪಕ್ಷದಲ್ಲಿ ಸೋತವರಿಗೆ ಹುದ್ದೆಯನ್ನು ಕೊಟ್ಟು ಹಿರಿಯರಿಗೆ ಮುಜುಗರ ಉಂಟು ಮಾಡಿದ್ದಾರೆ. ಚುನಾವಣೆಯಲ್ಲಿ ಸೋತರೆ ಉಸ್ತುವಾರಿಗಳನ್ನೇ ಹೊಣೆ ಮಾಡಿ ನಮ್ಮ ತಲೆಗೆ ಕಟ್ಟಬೇಡಿ. ನಾನು ನನ್ನ ಕ್ಷೇತ್ರವನ್ನು ನೋಡಿಕೊಂಡು ಇರುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.