ADVERTISEMENT

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಪೊನ್ನಣ್ಣ,ಮಂಥರ್‌ ಗೌಡ ಬಂಧಿಸಲು ಆಗ್ರಹ

ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 17:30 IST
Last Updated 4 ಏಪ್ರಿಲ್ 2025, 17:30 IST
ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಡಾ.ಮಂಥರ್‌ಗೌಡ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜು ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು
ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಡಾ.ಮಂಥರ್‌ಗೌಡ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜು ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು   

ಬೆಂಗಳೂರು: ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರಾದ ಎ.ಎಸ್‌. ಪೊನ್ನಣ್ಣ ಮತ್ತು ಮಂಥರ್‌ಗೌಡ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಿ, ಬಂಧಿಸಬೇಕು. ಅಲ್ಲಿಯವರೆಗೆ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು.

ಆತ್ಮಹತ್ಯೆ ಘಟನೆ ವರದಿಯಾಗುತ್ತಿದ್ದಂತೆ ವಿರೋಧಪಕ್ಷದ ನಾಯಕರಾದ ಆರ್‌.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಕಾಡುಗೊಂಡನಹಳ್ಳಿ ಅಂಬೇಡ್ಕರ್‌ ಆಸ್ಪತ್ರೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾತ್ರಿವರೆಗೆ ಅಲ್ಲಿಯೇ ಇದ್ದು, ಬಳಿಕ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರಿಗೆ ದೂರು  ಸಲ್ಲಿಸಿದರು.

ಇದೇ ಸಂದರ್ಭ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸುದ್ದಿಗಾರರ ಜತೆ ಮಾತನಾಡಿ, ‘ಜನರ ಸಮಸ್ಯೆಗಳ ಕುರಿತ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಕಾಂಗ್ರೆಸ್‌ ಶಾಸಕರು ವಿನಯ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ, ಶಾಸಕರು ಮತ್ತು ಅವರ ಕಡೆಯವರು ಪೊಲೀಸರ ಮೂಲಕ ವಿನಯ್‌ ಅವರಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ.  ವಿನಯ್‌ ಆತ್ಮಹತ್ಯೆಗೆ ಶಾಸಕರು ಮತ್ತು ಅವರ ಆಪ್ತ ಹಾಗೂ ಎಸ್ಪಿ ನೇರ ಕಾರಣ’ ಎಂದು ಆರೋಪಿಸಿದರು.

ADVERTISEMENT

‘ವಿನಯ್‌ ಅವರು ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದಾರೆ. ಆದರೂ ಮನೆಗೆ ಬಂದು  ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್‌ನವರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಒತ್ತಡ ಹೇರಿ ರಾಜಕೀಯ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್‌.ಹರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಮತ್ತು ಇತರರು ಇದ್ದರು. 

ಕಾಂಗಿಗಳ ದ್ವೇಷದ ರಾಜಕಾರಣಕ್ಕೆ ಅಂತ್ಯ ಇಲ್ಲವೇ? ಕೊಡಗಿನ ನಮ್ಮ ಕಾರ್ಯಕರ್ತನ ಮೇಲೆ ರಾಜಕೀಯ ಅಧಿಕಾರ ಬಳಸಿ ಕಿರುಕುಳ ನೀಡುತಿದ್ದ ಕಾಂಗ್ರೆಸ್ ನಡೆ
ಅಕ್ಷಮ್ಯ  ಸಿ.ಟಿ.ರವಿ. ವಿಧಾನಪರಿಷತ್‌ ಸದಸ್ಯ

‘ಜನರೇ ನಿಮ್ಮನ್ನು ಕಿತ್ತೆಸೆಯುತ್ತಾರೆ’

‘ಮುಖ್ಯಮಂತ್ರಿಯವರೇ ನಮ್ಮ ಕಾರ್ಯಕರ್ತರನ್ನು ಈ ರೀತಿ ಮಾಡುವುದಾದರೆ ನಾವು ನಮ್ಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನಾವೂ ಅಧಿಕಾರ ನೋಡಿದ್ದೇವೆ. ನಿಮಗೆ ಅಧಿಕಾರ ಕೊಟ್ಟವರು ಅದನ್ನು ಕಿತ್ತುಕೊಳ್ಳುತ್ತಾರೆ. ಆ ದಿನಗಳು ದೂರವಿಲ್ಲ’ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪೊಲೀಸರು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದ್ದನ್ನು ನಾವು ಯಾವತ್ತೂ ನೋಡಿಲ್ಲ. ಕೊಡಗಿನ ಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ ‘ಸರ್ಕಾರ ಎಂದರೆ ಕಾಂಗ್ರೆಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ? ಸಿದ್ದರಾಮಯ್ಯ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ?’ ಪರಮೇಶ್ವರ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ?’ ಎಂದು ಪ್ರಶ್ನಿಸಿದರು. ವಿನಯ್ ಸೋಮಯ್ಯ ಅವರ ಸೋದರ ಜೀವನ್ ಅವರು ಮಾತನಾಡಿ ‘ದೂರಿನಲ್ಲಿ ನಾಲ್ಕು ಜನರ ಹೆಸರು ಉಲ್ಲೇಖಿಸಿದ್ದರೂ ಎಫ್‍ಐಆರ್‌ನಲ್ಲಿ ಒಬ್ಬರ ಹೆಸರನ್ನಷ್ಟೇ ಹಾಕಿದ್ದಾರೆ. ನಮಗೆ ನ್ಯಾಯ ಸಿಗಬೇಕು’ ಎಂದರು.

ಕೊಡಗಿನಲ್ಲಿ ಇಂದು ಬಿಜೆಪಿ ಧರಣಿ

ಮೃತ ವಿನಯ್‌ ಸೋಮಯ್ಯ ಅವರ ಅಂತ್ಯಕ್ರಿಯೆ ಕೊಡಗು ಜಿಲ್ಲೆ ಸೋಮವಾರಪೇಟೆ ಗೋಣಿಮೂರೂರಿನಲ್ಲಿ ಶನಿವಾರ ನಡೆಯಲಿದ್ದು ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧಪಕ್ಷ ನಾಯಕರಾದ ಆರ್.ಅಶೋಕ ಛಲವಾದಿ ನಾರಾಯಣಸ್ವಾಮಿ ಮತ್ತಿತ್ತರು ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿ ಸರ್ಕಾರದ ವಿರುದ್ಧ ಧರಣಿ ನಡೆಸಲಿದ್ದಾರೆ.

ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್

ಮಡಿಕೇರಿ: ‘ವಿನಯ್ ಸೋಮಯ್ಯ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಫೆಬ್ರುವರಿಯಲ್ಲೇ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅವರಿಗೆ ಫೆ. 14ರಂದೇ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಹೀಗಾಗಿ, ಅವರನ್ನು ಠಾಣೆಗೆ ವಿಚಾರಣೆಗಾಗಿ ಕರೆಸಿಯೇ ಇಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಾರ್ಚ್ 21ರಂದು ತಹಶೀಲ್ದಾರ್ ನ್ಯಾಯಾಲಯವು ದುರ್ವರ್ತನೆ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ಅದನ್ನು ಅಂದೇ ಮೊಬೈಲ್ ಮೂಲಕ ತಿಳಿಸಿದಾಗ ವಿನಯ್ ಸೋಮಯ್ಯ ಅವರು ವಕೀಲರೊಂದಿಗೆ ಬರುವುದಾಗಿ ಹೇಳಿದ್ದರು. ನಂತರ, ಅವರನ್ನು ಸಂಪರ್ಕಿಸಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.