ADVERTISEMENT

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಲ್ಹಾದ ಜೋಶಿ ಉಪಸ್ಥಿತಿ: ಚರ್ಚೆಗೆ ಗ್ರಾಸ

ಏಜೆಂಟರ ಮೂಲಕ ಹೋದರೆ ಮಾತ್ರ ಕೆಲಸ: ಶಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 19:31 IST
Last Updated 25 ಸೆಪ್ಟೆಂಬರ್ 2020, 19:31 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಂಡು, ಶಾಸಕರ ಸಮಸ್ಯೆ ಆಲಿಸಿರುವುದು ಆ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಗರದ ಕ್ಯಾಪಿಟಲ್‌ ಹೊಟೇಲ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭಾ ನಡಾವಳಿಯ ವೀಕ್ಷಣೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಪ್ರಲ್ಹಾದ ಜೋಷಿ ಕೂಡ ಹಾಜರಿದ್ದರು ಎಂದು ಮೂಲಗಳು ಹೇಳಿವೆ.

ಸಭೆಗೆ ಮುನ್ನವೇ ‌‌‌‌‌‌‌‌‌‌‌‌‌‌‌‌‌‌‌‌‌ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಜೋಶಿ ಅವರು, 20 ನಿಮಿಷ ಚರ್ಚೆ ನಡೆಸಿದರು. ಈ ವೇಳೆ ಯಡಿಯೂರಪ್ಪ ಅವರೇ ಜೋಶಿ ಅವರನ್ನು ಸಭೆಗೆ ಆಹ್ವಾನಿಸಿದ್ದರು ಎಂದು ಹೇಳಲಾಗುತ್ತಿದೆ.

ADVERTISEMENT

ಶಾಸಕರ ಸಿಟ್ಟು:‘ಸರ್ಕಾರದಲ್ಲಿ ನಮ್ಮ ಕೆಲಸಗಳು ಆಗುತ್ತಿಲ್ಲ. ಅನುದಾನವೂ ಸಿಗುತ್ತಿಲ್ಲ. ಏಜೆಂಟರ ಮೂಲಕ ಹೋದರೆ ಮಾತ್ರ ಕೆಲಸಗಳು ಆಗುತ್ತವೆ ಎಂಬ ಸ್ಥಿತಿ ಇದೆ’ ಎಂದು ಶಾಸಕರು ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

‘ಸಚಿವರು ನಮಗೆ ಸ್ಪಂದಿಸುತ್ತಿಲ್ಲ. ಏಜೆಂಟರ ಮೂಲಕ ಹೋಗಬೇಕೆಂದರೆ ಹೇಗೆ? ಈ ವರ್ತನೆಯನ್ನು ಸಚಿವರು ಸರಿಪಡಿಸಿಕೊಳ್ಳಬೇಕು. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಕೆಲವು ಶಾಸಕರು ಹೇಳಿದರು.

‘ಸಚಿವರು ನಮ್ಮ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಬೇಕು’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಏರಿದ ಧ್ವನಿಯಲ್ಲಿ ಹೇಳಿದರು.

‘ನಾಲ್ಕು ಶಾಸಕರಿಗೆ ಒಬ್ಬ ಸಚಿವರನ್ನು ಜವಾಬ್ದಾರಿಯನ್ನಾಗಿ ಮಾಡಬೇಕು. ಆ ಶಾಸಕರ ಕೆಲಸಗಳನ್ನು ಆ ಸಚಿವರು ಕಾರ್ಯಗತ ಮಾಡಬೇಕು’ ಎಂದು ಶಾಸಕ ಶಿವಾನಗೌಡ ನಾಯಕ್‌ ಸಲಹೆ ನೀಡಿದರೆಂದೂ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಹಾಜರಿದ್ದ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ಉಮೇಶ ಕತ್ತಿಯವರು ಏನೂ ಮಾತನಾಡದೇ ಮೌನವಹಿಸಿದ್ದರು ಎಂದು ಹೇಳಲಾಗಿದೆ.

‘ಸಭೆ ಮೊದಲೇ ಏಕೆ ಕರೆಯವುದಿಲ್ಲ?’: ‘ಶಾಸಕಾಂಗ ಪಕ್ಷದ ಸಭೆಯನ್ನು ಕೊನೆಯಲ್ಲಿ ಕರೆಯುವುದಕ್ಕಿಂತ ಅಧಿವೇಶನದ ಮೊದಲೇ ಕರೆಯಬೇಕು. ಯಾವುದೇ ಮಸೂದೆಯನ್ನು ಮಂಡಿಸುವುದಕ್ಕೆ ಮೊದಲು ಶಾಸಕರ ಗಮನಕ್ಕೆ ತರಬೇಕು’ ಎಂದು ಕೆಲವು ಶಾಸಕರು ಪ್ರತಿಪಾದಿಸಿದರು.

‘ಕೊರೊನಾ ಮತ್ತು ಆರ್ಥಿಕ ಹಿಂಜರಿತ ಇದ್ದರೂ ಕ್ಷೇತ್ರಗಳ ಯೋಜನೆಗಳಿಗೆ ಅನುದಾನ ನೆರವು ನೀಡಬೇಕು. ಕೆಲಸಗಳನ್ನೇ ಮಾಡಿಸಲು ಸಾಧ್ಯವಾಗದಿದ್ದರೆ, ಚುನಾವಣೆ ಎದುರಿಸುವುದು ಹೇಗೆ’ ಎಂದು ಶಾಸಕರು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಕೊರೊನಾ ಸಂಕಷ್ಟ ಇತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿದರು.

ಶಾಸಕರಿಗೆ ವಿಪ್‌ ಜಾರಿ: ವಿಧಾನಮಂಡಲದ ಅಧಿವೇಶನದ ಕೊನೆಯ ದಿನವಾದ ಶನಿವಾರ ಎರಡು ಮಹತ್ವದ ಮಸೂದೆಗಳು ಮತ್ತು ಅವಿಶ್ವಾಸ ನಿರ್ಣಯ ಇರುವುದರಿಂದ ಸಂಜೆವರೆಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ.

‘ಭೂಸುಧಾರಣೆ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲೇಬೇಕಾಗಿದೆ. ಈ ಸಂದರ್ಭದಲ್ಲಿ ಎಲ್ಲ ಶಾಸಕರೂ ಹಾಜರಿರಬೇಕು’ ಎಂದು ಸಭೆಯಲ್ಲಿ ಯಡಿಯೂರಪ್ಪ ಸೂಚಿಸಿದರು.

ಎಚ್‌ಡಿಕೆ–ಬಿಎಸ್‌ವೈ ಭೇಟಿ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಮಾತುಕತೆ ನಡೆಸಿದರು.

ಅಧಿವೇಶನದ ಆರಂಭವಾದ ದಿನದಿಂದಲೂ ಕಲಾಪದಲ್ಲಿ ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. ಬೆಳಿಗ್ಗೆ ಕೆಲವು ಕಡತಗಳೊಂದಿಗೆ ಮುಖ್ಯಮಂತ್ರಿ ಭೇಟಿ ಬಂದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಬಳಿಕ ಅಧಿಕಾರಿಗಳನ್ನು ಹೊರಗೆ ಕಳಿಸಿ ಅರ್ಧ ಗಂಟೆಗೂ ಹೆಚ್ಚು ಸಮಯ ಇಬ್ಬರೇ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.