ADVERTISEMENT

ಬಿಜೆಪಿ: ಮೊದಲ ಪಟ್ಟಿ ಇಂದು ಪ್ರಕಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 20:03 IST
Last Updated 19 ಮಾರ್ಚ್ 2019, 20:03 IST
   

ನವದೆಹಲಿ: ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಪಕ್ಷದ ಇಲ್ಲಿನ ಕಚೇರಿಯಲ್ಲಿ ಮಂಗಳವಾರ ಸಂಜೆ ರಾಜ್ಯ ಮುಖಂಡರೊಂದಿಗೆ ಸಭೆ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಗತ್ಯ ಮಾಹಿತಿ ಸಂಗ್ರಹಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖಂಡರಾದ ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ್‌, ಪ್ರಹ್ಲಾದ್‌ ಜೋಶಿ, ಸಿ.ಟಿ. ರವಿ, ಬಿ.ಎಲ್‌. ಸಂತೋಷ್‌ ಅವರು ಸಂಜೆ 6 ಗಂಟೆಯಿಂದ 9ರವರೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾತ್ರಿ 9ರ ನಂತರ ನಡೆದ ಪಕ್ಷದ ಕೇಂದ್ರ ಚುನಾವಣೆ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಚರ್ಚಿಸಲಾಯಿತು.

ADVERTISEMENT

ಮಂಗಳವಾರ ತಡರಾತ್ರಿ ಅಥವಾ ಬುಧವಾರ ಮಧ್ಯಾಹ್ನದೊಳಗೆ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನುಳಿದ ಅಭ್ಯರ್ಥಿಗಳ ಪಟ್ಟಿ ಗುರುವಾರ ಪ್ರಕಟವಾಗುವ ಸಾದ್ಯತೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣಾ ಸಮಿತಿ ಸಭೆಯಲ್ಲಿ ಅಮಿತ್‌ ಶಾ, ಪಕ್ಷದ ಮುಖಂಡರಾದ ನಿತಿನ್‌ ಗಡ್ಕರಿ, ರಾಜನಾಥ ಸಿಂಗ್‌, ರಾಮಲಾಲ್‌, ಜೆ.ಪಿ. ನಡ್ಡಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.