ADVERTISEMENT

ಫಲಿತಾಂಶ ವಿಶ್ಲೇಷಣೆ | ರಾಜ್ಯದಲ್ಲಿ ಬಿಜೆಪಿಗೆ ಫಲಕೊಟ್ಟ ರಾಜಕೀಯ ತಂತ್ರಗಾರಿಕೆ

ವಿಡಿಯೊ ಸ್ಟೋರಿ

ಎಂ.ನಾಗರಾಜ
Published 4 ಜೂನ್ 2019, 9:08 IST
Last Updated 4 ಜೂನ್ 2019, 9:08 IST
   

ಬೆಂಗಳೂರು: ಸೂಕ್ತ ರಾಜಕೀಯ ತಂತ್ರಗಾರಿಕೆಗಳನ್ನು ಪ್ರಯೋಗಿಸಿ ಬಿಜೆಪಿ ಕರ್ನಾಟಕದಲ್ಲಿ ಬಹುದೊಡ್ಡ ಗೆಲುವು ಸಾಧಿಸಿದೆ. ಅದಕ್ಕೆ ಪ್ರತಿಯಾಗಿ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೋತಿವೆ.

ಕರ್ನಾಟಕದಲ್ಲಿ ಬಿಜೆಪಿ ಮುಟ್ಟಲೂ ಸಾಧ್ಯವಿಲ್ಲ ಎಂಬ ಕೆಲ ಕ್ಷೇತ್ರಗಳಿದ್ದು. ಆದರೆ, ಅಂಥ ಕ್ಷೇತ್ರಗಳನ್ನೇ ಬಿಜೆಪಿ ಇಂದು ಗೆದ್ದಿದೆ. ಕೋಲಾರ, ಕಲಬುರ್ಗಿಇದರಲ್ಲಿ ಪ್ರಮುಖವಾದವು. ಕೋಲಾರದಲ್ಲಿ ಮುನಿಯಪ್ಪ ಅವರಿಗೆ ವಿರೋಧವಿತ್ತು. ಅದಕ್ಕೆ ತಕ್ಕಂತೆ ಬಿಜೆಪಿ ತಂತ್ರಗಾರಿಕೆ ರೂಪಿಸಿ ಗೆದ್ದಿದೆ. ಸೋಲಿಲ್ಲದ ಸರದಾರ ಖರ್ಗೆ ಸೋತಿದ್ದಾರೆಂದರೆ ಅದಕ್ಕೆ ಬಿಜೆಪಿಯ ತಂತ್ರಗಾರಿಕೆಯೇ ಕಾರಣ. ಆರು ತಿಂಗಳಿಂದಲೂ ಬಿಜೆಪಿ ಕಲಬುರ್ಗಿಯಲ್ಲಿಕೆಲಸ ಮಾಡುತ್ತಿತ್ತು. ಆದರೆ, ಅದನ್ನು ಗ್ರಹಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿತ್ತು. ಖರ್ಗೆಯನ್ನು ಸೋಲಿಸಬೇಕೆಂಬ ಮನಸ್ಥಿತಿಗಳನ್ನು ಬಿಜೆಪಿ ಅಚ್ಚುಕಟ್ಟಾಗಿ ಸಂಘಟಿಸಿದೆ.

ತುಮಕೂರಿನಲ್ಲಿ ಮೈತ್ರಿ ಮತ್ತು ಕುಟುಂಬ ರಾಜಕಾರಣಕ್ಕಿದ್ದ ವಿರೋಧವನ್ನು ಎಚ್‌.ಡಿ ದೇವೇಗೌಡರು ಅನುಭವಿಸಿದ್ದಾರೆ. ತಮಕೂರಿನಲ್ಲಿ ಅವರಿಗಿದ್ದ ವಿರೋಧವನ್ನು ದೇವೇಗೌಡರು ಪರಿಗಣಿಸಬೇಕಿತ್ತು. ಮಂಡ್ಯದ ಸೋಲು ಜೆಡಿಎಸ್‌ಗೆ ಅತಿ ದೊಡ್ಡ ಹಿನ್ನಡೆ. ಇದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಬಿದ್ದ ಹೊಡೆತವೇ ಸರಿ. ಇದರಿಂದ ಮೈತ್ರಿ ಮೇಲೆ ಪರಿಣಾಮವಾಗಲೂಬಹುದು. ಅದನ್ನುಅಲ್ಲಗೆಳೆಯುವಂತಿಲ್ಲ. ಆದರೆ, ಪರಿಣಾಮ ಬೀರಲಿದೆ ಎಂದು ಖಚಿತವಾಗಿಯೂ ಹೇಳಲಾಗದು.

ADVERTISEMENT

ಮೈಸೂರು, ಬಾಗಲಕೋಟೆ, ಕೊಪ್ಪಳ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆದ ಸೋಲಿಗೆ ಸಿದ್ದರಾಮಯ್ಯ ನೇರ ಹೊಣೆಗಾರರು. ಮೈಸೂರನ್ನು ಜೆಡಿಎಸ್‌ಗೆ ಕೊಟ್ಟಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತೋ ಏನೋ. ಹಠಕ್ಕೆ ಬಿದ್ದು ಪಡೆದು ಕ್ಷೇತ್ರ ಪಡೆದ ಸಿದ್ದರಾಮಯ್ಯನವರೇ ಅಲ್ಲಿ ಸೋತಿದ್ದಾರೆ. ಕೊಪ್ಪಳದಲ್ಲಿ ಕುರುಬ ಸಮುದಾಯವಿದ್ದರೂ, ಅದು ಬಿಜೆಪಿಯದ್ದೇ ಕ್ಷೇತ್ರ.

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ತನ್ನ ಹಿಡಿತ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಅದೇ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರ ಪ್ರಭಾವ ಈ ಚುನಾವಣೆಯಲ್ಲಿ ಏನೂ ಕೆಲಸ ಮಾಡಿಲ್ಲ.

ಶಿವಮೊಗ್ಗ ಬಿಜೆಪಿಯ ಬಿಗಿ ಹಿಡಿತವಿರುವ ಕ್ಷೇತ್ರ. ಉಪ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿತ್ತು. ಹೀಗಾಗಿ ಬಿಜೆಪಿಯ ಅಂತರ ಕಡಿಮೆಯಾಗಿತ್ತು. ಆದರೆ, ಈ ಬಾರಿ ಮತದಾನ ಹೆಚ್ಚಾಗಿದೆ ಅಂತರವೂ ಹೆಚ್ಚಾಗಿದೆ. ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರನೆಂಬ ಕಾರಣಕ್ಕೆ ಮತ್ತು ಕಾಂಗ್ರೆಸ್‌–ಜೆಡಿಎಸ್‌ ಸೇರಿ ಚುನಾವಣೆ ಎದುರಿಸಿದ ಕಾರಣಕ್ಕೆ ಹೆಚ್ಚಿನ ಮತ ಬಂದಿದೆಯಷ್ಟೇ.ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಅವರಿಗೆ ಸಿಕ್ಕಿರುವ ಗೆಲುವ ಬಿಜೆಪಿಯ ಗೆಲುವು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.