ADVERTISEMENT

‘ಮನ್ ಕಿ ಬಾತ್ -ಮೋದಿ ಕೆ ಸಾಥ್’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:20 IST
Last Updated 5 ಫೆಬ್ರುವರಿ 2019, 19:20 IST
ಅಭಿಯಾನಕ್ಕೆ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು. ಶಾಸಕರಾದ ಸತೀಶ್‌ ರೆಡ್ಡಿ, ಕೆ.ಜಿ.ಬೋಪಯ್ಯ, ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್‌ ಇದ್ದಾರೆ – ಪ್ರಜಾವಾಣಿ ಚಿತ್ರ
ಅಭಿಯಾನಕ್ಕೆ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು. ಶಾಸಕರಾದ ಸತೀಶ್‌ ರೆಡ್ಡಿ, ಕೆ.ಜಿ.ಬೋಪಯ್ಯ, ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್‌ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನಸಾಮಾನ್ಯರ ಅಭಿಪ್ರಾಯಗಳನ್ನೊಳಗೊಂಡ ಬಿಜೆಪಿ ಸಂಕಲ್ಪಪತ್ರ ಸಿದ್ಧಪಡಿಸುವ ‘ಭಾರತ್ ಕೆ ಮನ್ ಕಿ ಬಾತ್ -ಮೋದಿ ಕೆ ಸಾಥ್’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಬಿಜೆಪಿ ರಾಜ್ಯ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇದಕ್ಕೆ ಚಾಲನೆ ನೀಡಿದರು.

‘ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ವಾಹನಗಳು ರಾಜ್ಯದಾದ್ಯಂತ ಸಂಚರಿಸಲಿವೆ. ಪ್ರತೀ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಒಂದರಂತೆ ವಾಹನಗಳು ಸಂಚರಿಸಿ ಜನರಿಂದ ಸಲಹೆ ಪಡೆಯಲಿವೆ. ಒಟ್ಟು 14 ವಾಹನಗಳು ರಾಜ್ಯದಲ್ಲಿ ಸಂಚರಿಸಿ ಜನರು ಮುಕ್ತವಾಗಿ ಸಲಹೆಗಳನ್ನು ನೀಡಲು ಅನುವು ಮಾಡಿಕೊಡಲಾಗಿದೆ’ ಎಂದು ಯಡಿಯೂರಪ್ಪ ತಿಳಿಸಿದರು.

ADVERTISEMENT

‘ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಮುನ್ನ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ದೇಶದಲ್ಲಿ ಒಟ್ಟು 10 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಪೆಟ್ಟಿಗೆಗಳನ್ನು ನೀಡಲಾಗಿದೆ’ ಎಂದರು.

‘ಭಾವಿ ಮುಖ್ಯಮಂತ್ರಿ ಎನ್ನಬೇಡಿ’

‘ಇನ್ನು ಮುಂದೆ ಯಾವುದೇ ಕಾರಣಕ್ಕೂ ನನ್ನನ್ನು ಭಾವಿ ಮುಖ್ಯಮಂತ್ರಿ ಅನ್ನಬೇಡಿ’ ಎಂದು ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ಕೆಲವು ಮುಖಂಡರು, ‘ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜೈ’ ಎಂದು ಕೂಗಿದರು.‘ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಕಚ್ಚಾಡಿಕೊಂಡು ಸರ್ಕಾರ ಪತನವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.