ADVERTISEMENT

ಲೈಂಗಿಕ ದುರ್ಬಳಕೆ, ವಂಚನೆ ಆರೋಪ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 8:42 IST
Last Updated 3 ಮಾರ್ಚ್ 2021, 8:42 IST
 ಸಚಿವ ರಮೇಶ ಜಾರಕಿಹೊಳಿ
ಸಚಿವ ರಮೇಶ ಜಾರಕಿಹೊಳಿ    

ಬೆಂಗಳೂರು: ಸಚಿವ ರಮೇಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷಕ್ಕೆ ಮುಜುಗರ ಮಾಡಲು ಬಯಸುವುದಿಲ್ಲ. ತನಿಖೆ ಆದ ಬಳಿಕ ನಿರ್ದೋಷಿಯಾಗಿ ಬರುತ್ತೇನೆ. ಆ ಬಳಿಕ ಮತ್ತೆ ಸಚಿವ ಆಗುತ್ತೇನೆ ಎಂದು ರಮೇಶ್‌ ಅವರು ಮುಖ್ಯಮಂತ್ರಿಗೆ ಹೇಳಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಸಲ್ಲಿಕೆಯಾಗಿದೆ.

ADVERTISEMENT

ಸಿ.ಡಿ ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಅವರ ತಮ್ಮ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ರಾಜೀನಾಮೆ ಪತ್ರ

'ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಇದ್ದಾರೆ. ದೆಹಲಿಗೆ ಹೋಗುತ್ತಿಲ್ಲ. ಪ್ರಕರಣದ ವಿಡಿಯೊಗಳನ್ನು ಯೂಟ್ಯೂಬ್‌ಗೆ ವಿದೇಶಗಳಿಂದ ಅಪ್ಲೋಡ್ ಮಾಡಿರುವ ಮಾಹಿತಿಗಳಿವೆ. ಹೀಗಾಗಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಸಹ ಕಾನೂನು ಹೋರಾಟ ಮಾಡುತ್ತೇವೆ' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ರಮೇಶ ಜಾರಕಿಹೊಳಿ ಅವರಹೆಸರು ಮಂಗಳವಾರ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಟ್ರೆಂಡ್‌ ಆಗಿತ್ತು. ಸಚಿವರ ಹೆಸರು ಟಾಪ್‌ 10ರಲ್ಲಿ ಮೂರನೇ 3ನೇ ಸ್ಥಾನದಲ್ಲಿದೆ.

'ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯಬೇಕು. ಇದು ಇಡೀ ರಾಷ್ಟ್ರಕ್ಕೆ ಗೊತ್ತಾಗಿರುವ ವಿಷಯ. ತಕ್ಷಣ ಪೋಲಿಸರು ಎಫ್‌ಐಆರ್ ದಾಖಲಿಕೊಂಡು ತನಿಖೆ ನಡೆಸಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಆಗ್ರಹಿಸಿದರು.

ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ, ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಸಲ್ಲಿಸಿದ್ದಾರೆ.

ದಿನೇಶ್‌ ಕಲ್ಲಹಳ್ಳಿ ಅವರು ವಿಡಿಯೊ, ಆಡಿಯೊ ತುಣುಕುಗಳು ಮತ್ತು ದೂರಿನ ಪ್ರತಿಯೊಂದಿಗೆ ಮಂಗಳವಾರ ಸಂಜೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಹೋಗಿದ್ದರು. ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ನೇರವಾಗಿ ದೂರು ಸಲ್ಲಿಸಲು ಯತ್ನಿಸಿದರು. ಆದರೆ, ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕಮಿಷನರ್‌ ಸೂಚಿಸಿದರು. ಬಳಿಕ ಅಲ್ಲಿಗೆ ಬಂದ ದಿನೇಶ್‌, ಸಚಿವರ ವಿರುದ್ಧ ದೂರು ನೀಡಿದರು.

ಹಾಲಪ್ಪ, ಮೇಟಿ ಪ್ರಕರಣಗಳ ನೆನಪು

2010ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ಧ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯವು ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.

2016 ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್‌.ವೈ. ಮೇಟಿ ಅವರ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಆಗಲೂ, ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.