ADVERTISEMENT

ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ ಸಚಿವ ಸ್ಥಾನ: ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 12:47 IST
Last Updated 13 ಜನವರಿ 2021, 12:47 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಯಡಿಯೂರಪ್ಪನವರ ಕೆಲವೊಂದು ಸಿಡಿ ಇಟ್ಟುಕೊಂಡು ಅವರ ರಕ್ತ ಸಂಬಂಧಿ ಮುಖಾಂತರ ಬ್ಲಾಕ್‌ ಮೇಲ್‌ ಮಾಡುತ್ತಿರುವವರನ್ನು ಸಚಿವರನ್ನಾಗಿ ಮಾಡಲಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪಗೆ ಸಿಡಿ ತೋರಿಸಿ ಬ್ಲಾಕ್‌ ಮೇಲ್‌ ಮಾಡುವ ಜೊತೆ ವಿಜಯೇಂದ್ರನಿಗೆ ಹಣ ಸಂದಾಯ ಮಾಡಿರುವಒಬ್ಬರನ್ನು ಈಗಾಗಲೇ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಇದೀಗ ಇಬ್ಬರನ್ನು ಸಚಿವರನ್ನಾಗಿ ಮಾಡಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನಸ್ಸು ಇರದೇ ಇದ್ದರೂ ಸಹ ಆ ಮೂವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವ ಮೂಲಕಅಪವಿತ್ರವಾದ ಕೆಲಸ ಯಡಿಯೂರಪ್ಪ ಅವರಿಂದ ಆಗಿದೆ’ ಎಂದು ದೂರಿದರು.

ADVERTISEMENT

‘ಸಚಿವರಾಗಿರುವ ಆ ಮೂವರು ನಾಲ್ಕು ತಿಂಗಳ ಹಿಂದೆ ನೆಲಮಂಗಲದ ಗೆಸ್ಟ್‌ಹೌಸ್‌ನಲ್ಲಿ ನನ್ನೊಂದಿಗೆ ಸಭೆ ನಡೆಸಿದ್ದರು. ನಾವೆಲ್ಲರೂ ಕೂಡಿ ಯಡಿಯೂರಪ್ಪನವರನ್ನು ಪದಚ್ಯುತಿ ಮಾಡೋಣ. ನೀವಾದರೂ ಮುಖ್ಯಮಂತ್ರಿಯಾಗಿ, ಇಲ್ಲವೇ ನಾವಾದರೂ ಆಗುತ್ತೇನೆ. ನೂರಾರು ಕೋಟಿ ಖರ್ಚು ಮಾಡಲು ತಯಾರಿದ್ದೇವೆ ಎಂದಿದ್ದರು’ ಎಂದು ಹೇಳಿದರು.

‘ಸಚಿವರನ್ನು ಮಾಡುವಲ್ಲಿಪ್ರಾದೇಶಿಕವಾರು, ಜಿಲ್ಲಾವಾರು, ಹಿರಿತನ ಮತ್ತು ಪ್ರಾಮಾಣಿಕತೆ ಇದಾವುದನ್ನು ಪರಿಗಣಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿಗೆ ಮನವಿ:‘ದೇಶದಲ್ಲಿ ಅನುವಂಶಿಕ ರಾಜಕಾರಣ ಹೋಗಬೇಕು’ ಎಂದಿರುವ ಪ್ರಧಾನಿ ಮೋದಿ ಅವರ ಬಳಿ ನಾನು ಕಳಕಳಿಯಿಂದ ಮನವಿ ಮಾಡುತ್ತೇನೆ. ಮೊದಲು ಕರ್ನಾಟಕದಿಂದ ಅದರಲ್ಲೂ ಯಡಿಯೂರಪ್ಪನವರ ಮನೆತನೆದಿಂದ ಅನುವಂಶಿಕ ರಾಜಕಾರಣ ಅಂತ್ಯ ಮಾಡುವ ಮೂಲಕ ಇಡೀ ದೇಶಕ್ಕೆ ಬಿಜೆಪಿ ಸಂದೇಶ ಕೊಡಬೇಕಾಗಿದೆ. ಯಡಿಯೂರಪ್ಪ ಮನೆಯಲ್ಲಿ ಒಬ್ಬ ಮುಖ್ಯಮಂತ್ರಿ, ಒಬ್ಬ ಲೋಕಸಭಾ ಸದಸ್ಯ, ಮತ್ತೊಬ್ಬ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಈ ವಂಶಪಾರಂ‍ಪರ್ಯಕ್ಕೆ ಪ್ರಧಾನಿ ಅಂತ್ಯ ಹಾಡಬೇಕು’ ಎಂದು ಮನವಿ ಮಾಡಿದರು.

ಮಠಗಳಿಗೆ ಹಣ:‘ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ ಅನ್ನು ವೀರಶೈವ ಲಿಂಗಾಯತ ಹೆಸರಿನಲ್ಲಿ ಬ್ಲಾಕ್‌ ಮೇಲ್‌ ಮಾಡಲು ಮಠಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಕೇಂದ್ರದ ವಿರುದ್ಧ, ಮೋದಿ ವಿರುದ್ಧ, ಅಮಿತ್‌ ಶಾ ವಿರುದ್ಧ ಬಂಡಾಯ ಏಳುವಂತೆ ಮಾಡಲು ₹ 83 ಕೋಟಿಯನ್ನು ವೀರಶೈವ ಲಿಂಗಾಯತ ಮಠಗಳಸ್ವಾಮೀಜಿಗಳಿಗೆ ಎರಡು ತಿಂಗಳ ಹಿಂದೆ ಯಡಿಯೂರಪ್ಪ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಬಿಜೆಪಿ ಸರ್ವನಾಶವಾಗಲಿದೆ’ ಎಂದು ಈಗಾಗಲೇ ಕಲಬುರ್ಗಿಯಲ್ಲಿ ಒಬ್ಬ ಸ್ವಾಮೀಜಿ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ಕೊಡಿಸಲುವೀರಶೈವ ಲಿಂಗಾಯತ ಸಮಾಜದ ಸ್ವಾಮೀಜಿಗಳಿಗೆ ಹಣ ಹಂಚಿಕೆ ಮಾಡಿದ್ದಾರೆ’ ಎಂದು ಹೇಳಿದರು.

ಮರ್ಯಾದೆ ತೆಗೆದ ಬಿಎಸ್‌ವೈ:‘ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಎಚ್‌.ಪಟೇಲ್‌ ಅವರು ಲಿಂಗಾಯತ ಸಮಾಜಕ್ಕೆ ಗೌರವ ತರುವ ಕೆಲಸ ಮಾಡಿದ್ದರು. ಆದರೆ, ನೀವು ಸಮಾಜದ ಮಾನ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದ್ದೀರಿ. ವೀರಶೈವ ಲಿಂಗಾಯತ ಸುಶಿಕ್ಷಿತ ಸಮಾಜ ನಿಮ್ಮ ಹಿಂದೆ ಇಲ್ಲ.ಸಮಾಜದ ಹೆಸರಿನಲ್ಲಿ ಹೈಕಮಾಂಡ್‌ ಬ್ಲಾಕ್‌ ಮಾಡುವುದನ್ನು ಬಿಡಿ ಎಂದುಇತ್ತೀಚೆಗೆ ನಡೆದ ಶಾಸಕರ ಸಭೆಯಲ್ಲಿ ಯಡಿಯೂರಪ್ಪನವರ ಸಮ್ಮುಖದಲ್ಲೇ ಹೇಳಿದ್ದೇನೆ’ ಎಂದರು.

ಅಂತ್ಯ ಆರಂಭ:‘ಸಂಕ್ರಾಂತಿ ಬಳಿಕ ಉತ್ತರಾಯಣದಲ್ಲಿ ಯಡಿಯೂರಪ್ಪನವರ ಅಂತ್ಯ ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಮೋದಿ ನೇತೃತ್ವದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ರಾಜೀನಾಮೆಗೆ ಆಗ್ರಹ:‘ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್‌ನಲ್ಲಿ ಮೂರು ಕೇಸ್‌ನಲ್ಲಿ ₹ 25 ಸಾವಿರ ದಂಡ ಆಗಿದೆ. ನೈತಿಕತೆ ಇದ್ದರೆ ಇಂದೇ ರಾಜೀನಾಮೆ ನೀಡಬೇಕು’ ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಮಾಧ್ಯಮಗಳ ವಿರುದ್ಧವೂ ಆರೋಪ:‘ಸಿಡಿ ತೋರಿಸಿ ಬ್ಲಾಕ್‌ ಮೇಲ್‌ ಮಾಡಿ ಸಚಿವರಾದವರ ಹೆಸರು ಬಹಿರಂಗಪಡಿಸಿ’ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಯತ್ನಾಳ್‌, ‘ನೀವು ಬರೇವಿಜೇಂದ್ರನ ಪರವಾಗಿ ಪ್ರಶ್ನೆ ಕೇಳುವುದುನ್ನು ಬಿಡಿ. ಯಾವಾವ ಮಾಧ್ಯಮದವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಯಾವಾವ ರೀತಿ ಮಾಧ್ಯಮ ನಡೆಸುತ್ತಿದ್ದಾರೆ ಎಂಬುದು ಗೊತ್ತಿದೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.