ADVERTISEMENT

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

48 ಗಂಟೆ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಲು ಆದೇಶ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 17:03 IST
Last Updated 7 ಮಾರ್ಚ್ 2023, 17:03 IST
ಮಾಡಾಳ್‌ ವಿರೂಪಾಕ್ಷಪ್ಪ
ಮಾಡಾಳ್‌ ವಿರೂಪಾಕ್ಷಪ್ಪ    

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್‌) ನಿಯಮಿತದ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್, ‘ಎಫ್ಐಆರ್‌ನಲ‌್ಲಿ ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಟೆಂಡರ್‌ಗೆ ಲಂಚ ನೀಡುವಂತೆ 30 ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವ ಬಗ್ಗೆಯಾಗಲೀ, ಅದಕ್ಕಾಗಿ ಪ್ರಯತ್ನ ನಡೆಸಿರುವುದಾಗಲೀ ಅಥವಾ ನಿರ್ದಿಷ್ಟ ದಿನದಂದು ಲಂಚ ಕೊಡುವಂತೆ ಕೇಳಿದ ಬಗ್ಗೆಯಾಗಲೀ ಇನಿತೂ ಸಾಕ್ಷಿ ಇಲ್ಲ. ಅರ್ಜಿದಾರರು ಮತ್ತು ಲಂಚ ಪಡೆದ ಆರೋಪ ಎದುರಿಸುತ್ತಿರುವ ಪುತ್ರ ಪ್ರಶಾಂತ್‌ ಅವರಿಗೂ ಈ ವಿಚಾರದಲ್ಲಿ ಸಂಬಂಧವಿಲ್ಲ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರು. ಮೇಲಾಗಿ ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ವಿಳಂಬ: ಮಧ್ಯಾಹ್ನದ 12 ಗಂಟೆ ವೇಳೆಗೆ ಪ್ರಕರಣದ ವಿಚಾರಣೆ ಆರಂಭವಾಯಿತು. ಈ ವೇಳೆ ಪ್ರತಿವಾದಿ ಪ್ರಾಸಿಕ್ಯೂಷನ್‌ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ಬಿ.ಬಿ.ಪಾಟೀಲ ಅವರು ತಡವಾಗಿ ಹಾಜರಾಗಿದ್ದು ವಿಶೇಷವಾಗಿತ್ತು. ನ್ಯಾಯಮೂರ್ತಿಗಳು ಆದೇಶದ ಅಂತಿಮ ಸಾಲುಗಳ ಉಕ್ತಲೇಖನ ನೀಡುವಾಗ ಪಾಟೀಲ ಅವರು ಗಡಿಬಿಡಿಯಲ್ಲಿ ಕೋರ್ಟ್ ಹಾಲ್‌ ಪ್ರವೇಶಿಸಿದರು.

ಇದಕ್ಕೂ ಮೊದಲು, ‘ಅರ್ಜಿದಾರರ ವಾದಕ್ಕೆ ಏನು ಉತ್ತರ ನೀಡುತ್ತೀರಿ’ ಎಂದು ನ್ಯಾಯಪೀಠ ಪ್ರಾಸಿಕ್ಯೂಷನ್‌ ಕಡೆ ತಿರುಗಿ ಪ್ರಶ್ನಿಸಿದಾಗ ಹಾಜರಿದ್ದ ಪಾಟೀಲ ಅವರ ಕಚೇರಿಯ ಕಿರಿಯ ವಕೀಲರು, ‘ನಮಗಿನ್ನೂ ಅರ್ಜಿದಾರರು ಕಾಪಿ ಸರ್ವ್‌ ಮಾಡಿಲ್ಲ. ತನಿಖಾಧಿಕಾರಿಯಿಂದ ಹೆಚ್ಚಿನ ವಿವರಣೆ ಪಡೆಯಬೇಕಿದೆ’ ಎಂದಷ್ಟೇ ಉತ್ತರಿಸಿದ್ದರು.

ಉಭಯತ್ರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣದ ಕುರಿತು ಆಕ್ಷೇಪಣೆ ಸಲ್ಲಿಸಲು ಮತ್ತು ತನಿಖಾಧಿಕಾರಿಯಿಂದ ಅಗತ್ಯ ಸಲಹೆ ಸೂಚನೆ ಪಡೆಯಲು ಕಾಲಾವಕಾಶ ನೀಡುವಂತೆ ಲೋಕಾಯುಕ್ತ ಪರ ವಕೀಲರು ಕೋರಿದ್ದಾರೆ. ಹಾಗಾಗಿ, ಲೋಕಯುಕ್ತ ಪೊಲೀಸರು ದಾಖಲೆ ಸಲ್ಲಿಸುವರೆಗೂ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತಿದೆ’ ಎಂದು
ತಿಳಿಸಿತು.

‘ಅರ್ಜಿದಾರ ಆರೋಪಿಯನ್ನು ಬಂಧಿಸಿದರೆ ₹ 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು. ಪ್ರತ್ಯಕ್ಷವಾಗಿಯಾಗಲೀ ಅಥವಾ ಅಪ್ರತ್ಯಕ್ಷ ರೀತಿಯಲ್ಲಾಗಲೀ ಪ್ರಕರಣದ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು. ಈ ಆದೇಶದ ಪ್ರತಿ ಲಭ್ಯವಾದ 48 ಗಂಟೆಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ನ್ಯಾಯಾಲಯದ ಮುಂದಿನ ಆದೇಶದವರೆಗೆ ಕೆಎಸ್‌ಡಿಎಲ್‌ಗೆ ಕಚೇರಿಗೆ ಅರ್ಜಿದಾರರು ಹೋಗಬಾರದು’ ಎಂಬ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಪ್ರತಿವಾದಿ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 17 ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ನನ್ನ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ. ನಾನು ಲಂಚವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ. ಪ್ರಕರಣದಲ್ಲಿ ನನ್ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ವಿಚಾರಣೆ ವೇಳೆ ಪೊಲೀಸರು ನನ್ನನ್ನು ಬಂಧಿಸುವ ಭೀತಿ ಇದೆ. ಆದ್ದರಿಂದ, ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಕರಣವೇನು?: ‘ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಟೆಂಡರ್‌ ಪ್ರಕ್ರಿಯೆಯಲ್ಲಿ ₹ 40 ಲಕ್ಷ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಇದೇ 2ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ದಾಖಲಿಸಿರುವ ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿ.

ಷರತ್ತುಗಳು

* ಆರೋಪಿ ವೈಯಕ್ತಿಕ ₹ 5 ಲಕ್ಷ ಮೊತ್ತದ ಬಾಂಡ್ ಸಲ್ಲಿಸಬೇಕು.

* ಇಬ್ಬರು ಭದ್ರತೆ ಕೊಡಬೇಕು.

* ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು.

* ತನಿಖೆಗೆ ಸಹಕರಿಸಬೇಕು.

ಮುಂದಿನ ವಿಚಾರಣೆಯನ್ನು ಇದೇ 17ಕ್ಕೆ ನಿಗದಿಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.