ADVERTISEMENT

ಸದನಕ್ಕೆ ಬಂದ ಪಾಟೀಲ; ಬಾರದ ಅಶ್ವತ್ಥನಾರಾಯಣ

ನಾರಾಯಣಗೌಡ ಗೈರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:21 IST
Last Updated 11 ಫೆಬ್ರುವರಿ 2019, 19:21 IST

ಬೆಂಗಳೂರು: ಬಿಜೆಪಿ ತೆಕ್ಕೆಯಲ್ಲಿರುವ ಅತೃಪ್ತ ಶಾಸಕರ ಗುಂಪಿನಲ್ಲಿದ್ದಾರೆ ಎನ್ನಲಾಗಿದ್ದ ಹಿರೇಕೆರೂರ ಶಾಸಕ ಬಿ.ಸಿ.‍ಪಾಟೀಲ ಅವರು ಸೋಮವಾರ ಸದನಕ್ಕೆ ಬಂದರು.

ಮೊದಲ ಎರಡು ದಿನ ಅವರು ಕಲಾಪಕ್ಕೆ ಬಂದಿರಲಿಲ್ಲ. ಬಜೆಟ್‌ ಮಂಡನೆಯ ವೇಳೆಯೂ ಹಾಜರಿರಲಿಲ್ಲ. ಪಾಟೀಲ ಅತೃಪ್ತ ಶಾಸಕರ ಜತೆಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಪಾಟೀಲ ಅವರು ಶನಿವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ‘ಕ್ಷೇತ್ರಕ್ಕೆ ಸಮರ್ಪಕ ಅನುದಾನ ಸಿಕ್ಕಿಲ್ಲ. ಹೀಗಾಗಿ, ಅಸಮಾಧಾನ ಇದೆ. ಆದರೆ, ಕಾಂಗ್ರೆಸ್‌ ತೊರೆಯುವುದಿಲ್ಲ’ ಎಂದು ಬಿ.ಸಿ.ಪಾಟೀಲ ಸೋಮವಾರವೂ ‍ಪುನರುಚ್ಚರಿಸಿದರು.

ಅತೃ‍ಪ್ತರ ಜತೆಗೆ ಇದ್ದಾರೆ ಎನ್ನಲಾದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಸಹ ಕಲಾಪಕ್ಕೆ ಹಾಜರಾದರು. ಅವರು ಮೊದಲ ದಿನ ಮೊಗಸಾಲೆಗೆ ಬಂದು ನಿರ್ಗಮಿಸಿದ್ದರು. ಎರಡನೇ ದಿನ ಬಂದಿರಲಿಲ್ಲ. ಬಜೆಟ್‌ ಅಧಿವೇಶನಕ್ಕೆ ಮುಂಬೈನಿಂದ ಬಂದಿದ್ದರು.

ADVERTISEMENT

ಮೊದಲ ಮೂರು ದಿನದ ಕಲಾಪಗಳಿಂದ ದೂರ ಉಳಿದಿದ್ದ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಹಾಗೂ ಆರ್‌.ರೋಷನ್‌ ಬೇಗ್‌ ಕೂಡಾ ಸದನಕ್ಕೆ ಸೋಮವಾರ ಬಂದರು.

ಬಾರದ ನಾರಾಯಣಗೌಡ: ಕೆ.ಆರ್. ಪೇಟೆ ಕ್ಷೇತ್ರದ ಜೆಡಿಎಸ್‌ ಶಾಸಕ ನಾರಾಯಣಗೌಡ ಸೋಮವಾರವೂ ಸದನಕ್ಕೆ ಹಾಜರಾಗಲಿಲ್ಲ.

ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿರುವ ಮಲ್ಲೇಶ್ವರ ಕ್ಷೇತ್ರದ ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಮಹದೇವ‍ಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಅವರೂ ಸಹ ಸದನದತ್ತ ಸುಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.