ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ‘ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ದ್ರೋಹ ಬಗೆಯಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರಿನ ತಮ್ಮ ನಿವಾಸದ ಬಳಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿರುವುದಕ್ಕೆ ರಾಜ್ಯದ ಜನರು ಕೇಂದ್ರದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರು, ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡು ಮಾತನಾಡುತ್ತಿರುವುದು ಕರ್ನಾಟಕದ ಜನರಿಗೆ ಮಾಡುವ ದ್ರೋಹವಾಗಿದೆ’ ಎಂದರು.
‘ತೆರಿಗೆ ಪಾಲಿನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. ನಮಗೆ ₹6,498 ಕೋಟಿ ಕೊಡಲಾಗಿದೆ. ಆದರೆ, ಉತ್ತರಪ್ರದೇಶಕ್ಕೆ ಹೆಚ್ಚು ಅಂದರೆ 31ಸಾವಿರ ಕೋಟಿ ರೂಪಾಯಿಯೂ ಜಾಸ್ತಿ ಕೊಟ್ಟಿದ್ದಾರೆ. ನಮಗೂ–ಅವರಿಗೂ ಎಷ್ಟೊಂದು ವ್ಯತ್ಯಾಸ ಮಾಡಲಾಗಿದೆ ನೋಡಿ?’ ಎಂದು ಕೇಳಿದರು.
‘ಪ್ರಲ್ಹಾದ ಜೋಶಿ ಇರಬಹುದು ಅಥವಾ ಇತರ ಸಂಸದರು ಇರಬಹುದು, ಅವರೆಲ್ಲರೂ ಕರ್ನಾಟಕಕ್ಕೆ ದ್ರೋಹ ಮಾಡುತ್ತಿದ್ದಾರೆ. ಜನರು ಅಷ್ಟೊಂದು ಜನ ಸಂಸದರನ್ನು ಗೆಲ್ಲಿಸಿಕೊಟ್ಟರಲ್ಲಾ? ಆ ಸಂಸದರೆಲ್ಲರೂ ಕರ್ನಾಟಕದ ಪರವಾಗಿ ಧ್ವನಿ ಎತ್ತಬೇಕಲ್ಲವೇ? ಇವತ್ತಿನವರೆಗೂ ಅವರು ಧ್ವನಿ ಎತ್ತಿಲ್ಲ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಕಳೆದ ಐದು ವರ್ಷಗಳಲ್ಲಿ ₹ 60ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರದ ವಿರುದ್ಧ ಹೋರಾಟದ ಬಗ್ಗೆ ಮುಂದೆ ಮಾತನಾಡುತ್ತೇನೆ’ ಎಂದು ಹೇಳಿದರು.
ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ ಪ್ರಕರಣ ವಾಪಸ್‌ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಬಿಜೆಪಿಯವರು ಹಿಂದೆ ಆರ್‌ಎಸ್ಎಸ್‌ನವರ ಕೇಸ್‌ಗಳನ್ನು ವಾಪಸ್ ಪಡೆದಿದ್ದರಲ್ಲ? ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಅದನ್ನು ತೀರ್ಮಾನಿಸಿ ಸಚಿವ ಸಂಪುಟ ಸಭೆಗೆ ತಂದಿದ್ದರು. ಅದನ್ನು ಸಭೆ ಒಪ್ಪಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ; ಅದು ಒಪ್ಪಿದರೆ ಮಾತ್ರ ಕೇಸ್‌ಗಳನ್ನು ವಾಪಸ್ ಪಡೆಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ನಾಡಹಬ್ಬ ದಸರಾ ಮಹೋತ್ಸವಕ್ಕೆ ಈ ಬಾರಿ ಹೆಚ್ಚು ಜನ ಬಂದಿದ್ದಾರೆ. ಅದ್ದೂರಿಯಾಗಿ ನಡೆಸಿದ್ದು ಇದಕ್ಕೆ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳೆಲ್ಲರೂ ಶ್ರಮಪಟ್ಟಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜನರೆಲ್ಲರೂ ಖುಷಿಯಾಗಿ ಉತ್ಸವ ನೋಡಿದ್ದಾರೆ. ಮಳೆ–ಬೆಳೆ ಚೆನ್ನಾಗಿ ಆಗಿರುವುದರಿಂದ ಅದ್ದೂರಿಯಾಗಿ ಮಾಡುವಂತೆ ಸೂಚಿಸಿದ್ದೆ; ಅದರಂತೆ ಮಾಡಿದ್ದಾರೆ. ಜನರು ಖುಷಿಯಾಗಿದ್ದರೆ ಸರ್ಕಾರಕ್ಕೆ ಹಾಗೂ ನಮಗೆಲ್ಲರಿಗೂ ಖುಷಿಯೇ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.