ADVERTISEMENT

ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಸಂದೇಶ: ನಿರಾಣಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 13:11 IST
Last Updated 21 ಜುಲೈ 2020, 13:11 IST
ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ
ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ   

ಬೆಂಗಳೂರು: ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ್ದಾರೆಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಸಂಜೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, 'ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಹಿಂದೂ ದೇವರುಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ವಿಚಾರ ಮಾಧ್ಯಮಗಳ‌ ಮೂಲಕ ಗಮನಕ್ಕೆ ಬಂದಿದೆ‌. ಇದು ನಿಜವಾಗಿದ್ದರೆ, ಬಹಳ ಕೆಟ್ಟ ನಡೆ-ನುಡಿ ಎಂದು ಹೇಳಬೇಕಾಗುತ್ತದೆ. ದೇವರು ಮತ್ತು ಧರ್ಮ ಅವರವರ ನಂಬಿಕೆ. ಅದನ್ನು ನಾವು ಗೌರವಿಸಬೇಕು. ಅವಹೇಳನ ಮಾಡಬಾರದು' ಎಂದು ತಿಳಿಸಿದ್ದಾರೆ.

ದೇವರನ್ನು ಅವಹೇಳನ ಮಾಡುವುದು ವಿಕೃತಿ ಎಂದಿರುವ ಸಿದ್ದರಾಮಯ್ಯ, 'ದೇವರು- ಧರ್ಮದ ಹೆಸರಲ್ಲಿ ಮುಗ್ಧರ ಶೋಷಣೆ, ಮೂಢನಂಬಿಕೆಯ ಆಚರಣೆ ಮಾಡುವುದು ತಪ್ಪು. ರಾಜಕೀಯ ಇಲ್ಲವೇ ಇನ್ನಾವುದೋ ಸ್ವಾರ್ಥ ಸಾಧನೆಗಾಗಿ ದೇವರು- ಧರ್ಮವನ್ನು ದುರ್ಬಳಕೆ ಮಾಡುವುದೂ ಸಹ ತಪ್ಪು. ಇದನ್ನು ಯಾರು ಮಾಡಿದರೂ ಖಂಡನೀಯ' ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕ್ಷಮೆ ಕೇಳಿದ ಮುರುಗೇಶ್‌ ನಿರಾಣಿ

ಹಿಂದೂ ದೇವರ ಅವಹೇಳನ ಮಾಡುವ ವಾಟ್ಸಾಪ್ ಸಂದೇಶವೊಂದನ್ನು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುರುಗೇಶ್‌ ನಿರಾಣಿ ಕ್ಷಮೆಯಾಚಿಸಿದ್ದಾರೆ.

ರಾಮ, ಕೃಷ್ಣ ಮತ್ತು ಇತರರ ಬಗೆಗಿನ ಅವಹೇಳನಕಾರಿ ಸಂದೇಶವನ್ನು ನಿರಾಣಿಯವರ ವೈಯಕ್ತಿಕ ಸಂಖ್ಯೆಯಿಂದ ವಾಟ್ಸಾಪ್ ಗ್ರೂಪ್‌ಗೆ ಮಂಗಳವಾರ ಬೆಳಿಗ್ಗೆ 5:28ಕ್ಕೆಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.

ಆ ವಾಟ್ಸಾಪ್‌ ಗ್ರೂಪ್‌ನಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರೂ ಇದ್ದರು. ನಿರಾಣಿಯವರ ಸಂದೇಶ ನೋಡಿದ ನಂತರ ಅವರು ಗ್ರೂಪ್‌ನಿಂದ ಹೊರಹೋದರು ಎಂಬ ಮಾಹಿತಿ ಲಭ್ಯವಾಗಿದೆ.

'ಈ ಸಂಖ್ಯೆ ನನ್ನದು, ಆದರೆ ನಾನು ಸಂದೇಶವನ್ನು ರವಾನಿಸಿಲ್ಲ. ಸಾರ್ವಜನಿಕರ ಸಂಪರ್ಕದ ಉದ್ದೇಶಕ್ಕಾಗಿ, ನನ್ನ ಆಪ್ತ ಸಹಾಯಕ ಮತ್ತು ಗನ್‌ಮ್ಯಾನ್ ಈ ಸಂಖ್ಯೆಯನ್ನು ಬಳಸುತ್ತಾರೆ. ಕಳೆದ ರಾತ್ರಿ ನನ್ನ ಆಪ್ತ ಸಹಾಯಕರ ಬಳಿ ಈ ಸಂಖ್ಯೆ ಹೊಂದಿರುವ ಫೋನ್‌ ಇತ್ತು. ಎಲ್ಲಿಂದಲೋ ಬಂದ ಸಂದೇಶವು ನಿರ್ಲಕ್ಷ್ಯದಿಂದಾಗಿ ಫಾರ್ವರ್ಡ್ ಆಗಿದೆ. ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾನು ರಾಜ್ಯದ ಜನರಿಗೆ ಕ್ಷಮೆಯಾಚಿಸುತ್ತೇನೆ' ಎಂದು ನಿರಾಣಿ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.