ADVERTISEMENT

ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಎಂದ ಸಿದ್ದರಾಮಯ್ಯ: ಕ್ಷಮೆಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 11:20 IST
Last Updated 3 ನವೆಂಬರ್ 2021, 11:20 IST
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ನಗರದ ಮೌರ್ಯವೃತ್ತದ ಬಳಿ ಪ್ರತಿಭಟನೆ.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ನಗರದ ಮೌರ್ಯವೃತ್ತದ ಬಳಿ ಪ್ರತಿಭಟನೆ.   

ಬೆಂಗಳೂರು: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬುದಾಗಿ ಹೇಳಿಕೆ ನೀಡಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ನಗರದ ಮೌರ್ಯವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಿ.ರಾಜೀವ್‌ ಅವರು, ದಲಿತರ ಕುರಿತು ಆಕ್ಷೇಪಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಸಾರ್ವಜನಿಕರುಮತ್ತು ಬಿಜೆಪಿಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ದಲಿತರು ಮತ್ತು ಹಿಂದುಳಿದ ವರ್ಗದವರು ಸಹಜವಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ ಎಂದರು.

ADVERTISEMENT

ಬಿಜೆಪಿ ರಾಜ್ತ ಘಟಕದ ಪ್ರಧಾನಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಜನರ ತಿರಸ್ಕಾರಕ್ಕೆ ಒಳಗಾಗಿದೆ. ಇನ್ನಾದರೂ ಬಾಯಿಗೆ ಬಂದಂತೆ ಮಾತನಾಡುವುದು ಬಿಟ್ಟು, ದಲಿತರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಎಸ್‌ಸಿ ಮೋರ್ಚಾ ಪ್ರಭಾರಿ ಸಿದ್ದರಾಜು ಮಾತನಾಡಿ, ಸಿದ್ದರಾಮಯ್ಯ ಅವರ ಹೇಳಿಕೆ ಅಕ್ಷಮ್ಯ. ಚಪ್ಪಾಳೆ ಗಿಟ್ಟಿಸಲೆಂದೇ ಕಮೆಡಿಯನ್‌ ರೀತಿ ಅವರು ವರ್ತಿಸುತ್ತಿದ್ದು, ಇದರಿಂದ ದಲಿತರಿಗೆ ನೋವುಂಟಾಗಿದೆ ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಂದರೆ ದಲಿತರು, ದಲಿತರು ಎಂದರೆ ಕಾಂಗ್ರೆಸ್‌ ಎನ್ನುವ ಸಂದರ್ಭ ಇತ್ತು. ದಲಿತರನ್ನೇ ಮತಬ್ಯಾಂಕ್ ಮಾಡಿಕೊಂಡು ದೇಶವನ್ನು ಆಡಳಿತ ನಡೆಸಿಕೊಂಡೇ ಬಂದಿತ್ತು. ಈಗ ದಲಿತರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಸೋಲು ಕಾದಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಕೂಡಾ 2006 ರಲ್ಲಿ ಕಾಂಗ್ರೆಸ್‌ಗೆ ಹೊಟ್ಟೆಪಾಡಿಗೇ ಹೋಗಿದ್ದಲ್ಲವೆ ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಕಾಂಗ್ರೆಸ್‌ನ ಎಲ್ಲ ನಾಯಕರಿಗೂ ಅವರು ದ್ರೋಹ ಬಗೆದಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಎಂ.ಶಂಕರಪ್ಪ, ಎಂಸಿಎ ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ, ಬೆಂಗಳೂರು ಕೇಂದ್ರ ಜಿಲ್ಲೆ ಬಿಜೆಪಿ ಅಧ್ಯಕ್ಷ ಮಂಜುನಾಥ್‌, ಉತ್ತರ ಜಿಲ್ಲೆಯ ಅಧ್ಯಕ್ಷ ಮುನಿರಾಜು ಮತ್ತು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಶ್ರೀನಿವಾಸ್‌ ಹಾಗೂ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ವೆಂಕಟೇಶ್‌, ಪ್ರಧಾನಕಾರ್ಯದರ್ಶಿ ಜಗದೀಶ್‌, ಕಾರ್ಯದರ್ಶಿ ವೆಂಕಟೇಶ್‌ ದೊಡ್ಡೇರಿ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.