
ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ (ಬೆಳಗಾವಿ): ಉತ್ತರ ಕರ್ನಾಟಕದ ಎಲ್ಲ ಯೋಜನೆಗಳಿಗೆ ತಡೆಹಾಕಿ ಕೂತಿರುವ ಬಿಜೆಪಿ, ಉತ್ತರ ಕರ್ನಾಟಕದ ವಿರೋಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯ ಮೇಲೆ ಸಂಜೆ 6.30ರಿಂದ 9.30ರವರೆಗೆ ಉತ್ತರ ನೀಡಿದ ಅವರು, ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದೂ ದೂರಿದರು.
‘ಉತ್ತರ ಕರ್ನಾಟಕ ಬಹುಮುಖ್ಯ ನೀರಾವರಿ ಯೋಜನೆಗಳಲ್ಲಿ ಒಂದಾದ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅನುಮತಿ ನೀಡಿಲ್ಲ. ಯೋಜನೆ ಅನುಷ್ಠಾನ ಸಂಬಂಧ ನಿಯೋಗ ಕರೆದುಕೊಂಡು ಹೋಗಿದ್ದಾಗ, ಗೋವಾದ ಜತೆಗೆ ರಾಜಿ ಮಾಡಿಕೊಳ್ಳಿ ಎಂದಿದ್ದರು. ಈಗ ಕೇಂದ್ರ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರವಿದೆ. ಈಗ ಅವರು ಏಕೆ ರಾಜಿ ಮಾಡಿಕೊಳ್ಳಬಾರದು. ನೀವು ಈಗ ಕೇಂದ್ರದ ಮೇಲೆ ಒತ್ತಡ ಹಾಕಿ’ ಎಂದು ಬಿಜೆಪಿ ಸದಸ್ಯರನ್ನು ತಿವಿದರು.
‘ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ಕರ್ನಾಟಕಕ್ಕೆ 173 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿ 2013ರಲ್ಲೇ ತೀರ್ಪು ಬಂದಿದೆ. ಆದರೆ 12 ವರ್ಷವಾದರೂ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 2023–24ರ ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ಘೋಷಿಸಿದ್ದರು. ಅದರಲ್ಲಿ ಈವರೆಗೆ ಒಂದು ರೂಪಾಯಿಯೂ ಬಿಡುಗಡೆ ಆಗಿಲ್ಲ’ ಎಂದು ಕಾಗದ ಪತ್ರಗಳನ್ನು ಸದನದ ಮುಂದಿಟ್ಟರು.
‘ಕಬ್ಬಿನ ಖರೀದಿ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಸಾಗಣೆ ವೆಚ್ಚವನ್ನೂ ಸೇರಿಸಿ ದೊಡ್ಡ ಖರೀದಿ ಬೆಲೆ ಎಂಬಂತೆ ಘೋಷಣೆ ಮಾಡಿದೆ. ಆದರೆ ಸಾಗಣೆ ವೆಚ್ಚ ಕಡಿತ ಮಾಡಿದರೆ ರೈತರಿಗೆ ಕಡಿಮೆ ಹಣ ಸಿಗುತ್ತದೆ. ಇದರಿಂದಲೇ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗಿದ್ದು. ನಾವು ಕಾರ್ಖಾನೆ ಕಡೆಯಿಂದ ಹೆಚ್ಚುವರಿಯಾಗಿ ಸ್ವಲ್ಪ, ಸರ್ಕಾರದ ಕಡೆಯಿಂದ ಸ್ವಲ್ಪ ಹಣ ಕೊಟ್ಟು ಖರೀದಿ ಬೆಲೆ ಹೆಚ್ಚಿಸಿದ್ದೇವೆ’ ಎಂದರು.
‘ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೂ ಕೇಂದ್ರ ಸರ್ಕಾರವೇ ಕಾರಣ. ಎಥೆನಾಲ್‌ಗಾಗಿ ಹೆಚ್ಚಿನ ಮೆಕ್ಕೆಜೋಳ ಖರೀದಿಗೆ ಹಂಚಿಕೆ ಮಾಡಿದ್ದರೆ, ಬಹಳಷ್ಟು ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇಂತಹ ಅಸಹಕಾರವನ್ನು ಈಗ ಇನ್ನಷ್ಟು ಹೆಚ್ಚಿಸಿದೆ. ನರೇಗಾ ಯೋಜನೆ ಅಡಿಯಲ್ಲಿ ಅನುದಾನ ಕಡಿತ ಮಾಡಿದೆ. ಜಲಜೀವನ ಮಿಷನ್ ಯೋಜನೆ ಅಡಿ ₹13,000 ಕೋಟಿ ಅನುದಾನ ತಡೆಹಿಡಿದಿದೆ. ಇದೆಲ್ಲವೂ ಕೇಂದ್ರದ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕದ ವಿರೋಧಿ ಎಂಬುದನ್ನು ತೋರಿಸುತ್ತವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.