ಬೆಂಗಳೂರು: ‘ಇಡೀ ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಜನರ ಮನೋಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಅಪ್ರಬುದ್ಧ ವರ್ತನೆ’ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
‘ನಾಡಿನ ಸಂಕಟದ ಸಂದರ್ಭದಲ್ಲಿ ತಮ್ಮ ಅಪಾರ ಅನುಭವವನ್ನು ಬಳಸಿಕೊಂಡು ಸಂಕಷ್ಟ ನಿರ್ವಹಣೆಗೆ ರಚನಾತ್ಮಕ ಸಲಹೆಗಳನ್ನು ನೀಡುವುದು ಬಿಟ್ಟು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ವರ್ತನೆ ಮತ್ತು ನಾಡಿನ ಜನರಿಗೆ ಬಗೆಯುತ್ತಿರುವ ದ್ರೋಹ’ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಿಡಿಕಾರಿದ್ದಾರೆ.
‘ನೀವು ಶಾಸಕರಿಗೆ ಬರೆದಿರುವ ಪತ್ರವನ್ನು ಓದಿದಾಗ ನೀವೆಲ್ಲೋ ನಿಮ್ಮ ಜವಾಬ್ದಾರಿಯ ಸ್ಥಾನವನ್ನು ಮರೆತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಎಲ್ಲ ನಿರ್ಣಯಗಳನ್ನು ಟೀಕಿಸುವುದೇ ಏಕ ಮಾತ್ರ ಜವಾಬ್ದಾರಿ ಅಂದುಕೊಂಡಂತಿದೆ. ಶಾಸಕರಿಗೆ ಪತ್ರ ಬರೆಯುವುದರಲ್ಲಿ ರಾಜಕೀಯ ಉದ್ದೇಶ ಮತ್ತು ತಮ್ಮ ಪಕ್ಷದಲ್ಲಿ ಮೂಲೆ ಗುಂಪಾಗುತ್ತಿರುವ ಹತಾಶ ಮನಸ್ಥಿತಿ ಎದ್ದು ಕಾಣುತ್ತಿದೆ’ ಎಂದು ಕಾರ್ಣಿಕ್ ವ್ಯಂಗ್ಯವಾಡಿದ್ದಾರೆ.
‘ಆರೋಗ್ಯ ಮತ್ತು ವೈದ್ಯಕೀಯ ಸಿಬ್ಬಂದಿಯ ಮನೋಸ್ಥೈರ್ಯವನ್ನು ಇನ್ನಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷ ಬೇಧ ಮರೆತು ಒಂದಾಗಿ ಕೆಲಸ ಮಾಡಬೇಕಾದ ಸಂದರ್ಭವಿದು. ಅದನ್ನು ಬಿಟ್ಟು ಕೀಳುಮಟ್ಟದ ರಾಜಕಾರಣ ಮಾಡುವುದು ಎಷ್ಟು ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯದ ಮುಖ್ಯಮಂತ್ರಿ ಆಗಿದ್ದೆ ಎಂಬ ಒಂದೇ ಕಾರಣಕ್ಕೆ ಎಲ್ಲ ವಿಷಯಗಳಲ್ಲೂ ಋಣಾತ್ಮಕ ಟೀಕೆಗಳು ನಿಮ್ಮ ರೋಗಗ್ರಸ್ಥ ಮನಸ್ಸಿಗೆ ಹಿಡಿದ ಕೈಗನ್ನಡಿ’ ಎಂದು ಹೇಳಿದ್ದಾರೆ.
‘ನಮ್ಮ ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡುವ ಸಂದರ್ಭ ತಾವು ಬಳಸುತ್ತಿರುವ ಭಾಷೆ ನಿಮ್ಮ ರಾಜಕೀಯ ಅಸಹನೆ, ದರ್ಪ, ದುರಹಂಕಾರಕ್ಕೆ ಸಾಕ್ಷಿಯಾಗಿದೆ. ಕ್ಷುಲ್ಲಕವಾಗಿ ವರ್ತಿಸುವುದರ ಬದಲು ಪ್ರಬುದ್ಧ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಬೇಕು. ಆಗ ಆ ಸ್ಥಾನಕ್ಕೂ ಶೋಭೆ ಬರುತ್ತದೆ’ ಎಂದು ಕಾರ್ಣಿಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.