ADVERTISEMENT

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹಿಜಾಬ್ ಕಡ್ಡಾಯವಿಲ್ಲವೇಕೆ: ರಾಹುಲ್‌ಗೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 10:59 IST
Last Updated 5 ಫೆಬ್ರುವರಿ 2022, 10:59 IST
   

ಬೆಂಗಳೂರು: ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಸಹ ಮಾಲೀಕ ರಾಹುಲ್ ಗಾಂಧಿ ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಹಿಜಾಬ್ ಹೆಸರಿನಲ್ಲಿ ಶಿಕ್ಷಣಕ್ಕೆ ಅಡ್ಡಿ ಮಾಡುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನು ಕದಿಯಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು. ‘ಶಿಕ್ಷಣದ ಹಾದಿಯಲ್ಲಿ ಹಿಜಾಬ್ ಅಡ್ಡಿಯಾಗುವಂತೆ ಮಾಡುವ ಮೂಲಕ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ನಾವು ಕದಿಯುತ್ತಿದ್ದೇವೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನವನ್ನು ಕೊಡುತ್ತಾಳೆ. ಆಕೆ ತಾರತಮ್ಯ ಮಾಡುವುದಿಲ್ಲ’ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಶಿಕ್ಷಣ ಪಡೆಯಲು ಹಿಜಾಬ್ ಅತ್ಯಗತ್ಯವಾಗಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸುವುದಿಲ್ಲ? ಎಂದು ಪ್ರಶ್ನಿಸಿದೆ.

ADVERTISEMENT

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜುಗಳಲ್ಲಿ ಪ್ರವೇಶ ನಿರಾಕರಿಸಿದ ವಿಚಾರ ಉಡುಪಿ ಹಾಗೂ ಕುಂದಾಪುರದಲ್ಲಿ ವರದಿಯಾಗಿತ್ತು. ಬಳಿಕ ಬೆಳಗಾವಿ ರಾಮದುರ್ಗದ ಕಾಲೇಜಿನಲ್ಲೂ ಇದೇ ರೀತಿಯ ವಿದ್ಯಮಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.