ADVERTISEMENT

ಬಳ್ಳಾರಿಯಲ್ಲಿ ಬಿಜೆಪಿ ‘ನವಶಕ್ತಿ ಸಮಾವೇಶ’

10 ಲಕ್ಷ ಜನ ಸೇರುವ ನಿರೀಕ್ಷೆ * ಜೆ.ಪಿ.ನಡ್ಡಾ, ಅರ್ಜುನ್‌ ಮುಂಡಾ ಭಾಗಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:53 IST
Last Updated 15 ನವೆಂಬರ್ 2022, 20:53 IST

ಬೆಂಗಳೂರು: ಬಿಜೆಪಿ ಎಸ್‌ಟಿ ಮೋರ್ಚಾದ ‘ನವಶಕ್ತಿ ಸಮಾವೇಶ’ ಇದೇ 20 ರಂದು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಎಸ್‌.ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್‌ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಕಾರ್ಯಕ್ರಮವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟಿಸಲಿದ್ದು, ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಎಸ್‌ಟಿ ಸಮುದಾಯಗಳ ಜನರು ಭಾಗವಹಿಸಿ ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಸಂತಸ ಸೂಚಿಸಿ, ವಿಜಯೋತ್ಸವ ಆಚರಿಸಲಿದ್ದಾರೆ. 68 ಕ್ಕೂ ಹೆಚ್ಚು ಬುಡಕಟ್ಟು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬಳ್ಳಾರಿ, ಹಳೆ ಮೈಸೂರು, ಮಧ್ಯಕರ್ನಾಟಕದ ಸುತ್ತಲಿನ ಪ್ರದೇಶಗಳಿಂದ 6 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಿಂದ 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ 6,200 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, 15 ಸಾವಿರದಿಂದ 18 ಸಾವಿರ ಕ್ರೂಸರ್‌ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಲ್ಲಿ 28 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಬಿಜೆಪಿಯ ಮುಖಂಡರು ಮತ್ತು ಬಿಜೆಪಿ ಸರ್ಕಾರ ಮೀಸಲಾತಿ ವಿರೋಧಿಗಳು ಎಂದುಕಾಂಗ್ರೆಸ್‌ ಪಕ್ಷವು ಸುಳ್ಳು ಮಾಹಿತಿಯನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ. ಅದನ್ನು ಹೋಗಲಾಡಿಸುವ ಮಾದರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಪರಿಶಿಷ್ಟ ಪಂಗಡದ ಬಗ್ಗೆ ಬಿಜೆಪಿಗಿರುವ ಬದ್ಧತೆಗೆ ಇದು ಸ್ಪಷ್ಟ ನಿದರ್ಶನ ಎಂದರು.

ನವಶಕ್ತಿ ಸಮಾವೇಶದಲ್ಲಿ ಕೇಂದ್ರ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅದ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.