ಬೆಂಗಳೂರು: ಪಕ್ಷದ ವಿವಿಧ ಶಾಸಕರು, ನಾಯಕರು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದು, ಅವುಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕು. ಶಿಸ್ತು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಉಸ್ತುವಾರಿ ಅರುಣ್ ಸಿಂಗ್ ಅವರು ಬೆಳಗಾವಿಯಲ್ಲಿ ಶನಿವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಖಡಕ್ ಸಂದೇಶ ನೀಡಿದರು.
ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ನಿಯೋಜಿತರಲ್ಲದ ಯಾವುದೇ ವ್ಯಕ್ತಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದು ಅವರು ತಾಕೀತು ಮಾಡಿದರೆಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂತಾದವರು ಇತ್ತೀಚಿನ ದಿನಗಳಲ್ಲಿ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸಭೆಯಲ್ಲಿ ಪ್ರಸ್ತಾಪವಾಯಿತು. ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಅರುಣ್ ಸಿಂಗ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರು.
‘ಪಕ್ಷದಲ್ಲಿ ಇರುವವರು ಪಕ್ಷದ ಆಂತರಿಕ ಶಿಸ್ತಿಗೆ ಒಳಪಡಬೇಕು. ಯಾವುದೇ ಆಕ್ಷೇಪ, ದೂರುಗಳು ಇದ್ದಲ್ಲಿ ಪಕ್ಷದ ವೇದಿಕೆಗಳಲ್ಲೇ ಹೇಳಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಪಕ್ಷದ ಕಚೇರಿಗೆ ಬಂದು ಕೂರುತ್ತೇನೆ. ನಿಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು’ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸಭೆಯಲ್ಲಿ ಬೆಳಿಗ್ಗೆ ಗೋಹತ್ಯೆ ನಿಷೇಧ ಮತ್ತು ‘ಲವ್ ಜಿಹಾದ್’ ತಡೆ ಕಾನೂನು ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನದ ಬಳಿಕ ಉಪಚುನಾವಣೆಗಳು, ಗ್ರಾಮಪಂಚಾಯತ್ ಚುನಾವಣೆ ವಿಷಯದ ಕುರಿತು ಚರ್ಚೆ ನಡೆಯಿತು. ಹೀಗಾಗಿ ಪಕ್ಷದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಆಹ್ವಾನಿತರಿಗೆ ಮಾತನಾಡಲು ಹೆಚ್ಚಿನ ಅವಕಾಶ ಸಿಗಲಿಲ್ಲ ಎಂದು ಮೂಲಗಳು ಹೇಳಿವೆ.
ಸಂಪುಟ ವಿಸ್ತರಣೆ ಅನಿರ್ದಿಷ್ಟಾವಧಿ ಮುಂದಕ್ಕೆ?
ಪ್ರಮುಖರ ಸಮಿತಿ ಸಭೆ ಹಾಗೂ ಕಾರ್ಯಕಾರಿಣಿಯಲ್ಲ ಸಂಪುಟ ವಿಸ್ತರಣೆ ವಿಚಾರ ಪ್ರಧಾನವಾಗಿ ಚರ್ಚೆಗೆ ಬರಲಿಲ್ಲ.
‘ವರಿಷ್ಠರ ಜತೆ ಮಾತನಾಡಿ ತಿಳಿಸುತ್ತೇನೆ’ ಎಂದು ಅರುಣ್‌ಸಿಂಗ್ ಹೇಳಿರುವ ಕಾರಣ ವಿಸ್ತರಣೆ ಪ್ರಕ್ರಿಯೆ ಬಹುತೇಕ ವಿಧಾನಮಂಡಲ ಅಧಿವೇಶನದ ಬಳಿಕ ಅಥವಾ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ ನಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.