ADVERTISEMENT

ಸರ್ಕಾರ ಕಟ್ಟಿ ಹಾಕಲು ಬಿಜೆಪಿ ಕಾರ್ಯತಂತ್ರ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 15:33 IST
Last Updated 5 ಆಗಸ್ಟ್ 2025, 15:33 IST
ಆರ್. ಅಶೋಕ ಹಾಗೂ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖ ಶಾಸಕರ ಸಭೆ 
ಆರ್. ಅಶೋಕ ಹಾಗೂ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖ ಶಾಸಕರ ಸಭೆ    

ಬೆಂಗಳೂರು: ‘ಕಾಂಗ್ರೆಸ್‌ ನೇತೃತ್ವದ ಸರ್ಕಾರದ ದುರಾಡಳಿತ, ಕಾಲ್ತುಳಿತದಿಂದ 11 ಮಂದಿ ಸಾವು, ರಸಗೊಬ್ಬರದ ಕೊರತೆ, ಬಿಬಿಎಂಪಿ ವಿಭಜನೆ ಸೇರಿ ಹಲವು ಜ್ವಲಂತ ವಿಷಯಗಳನ್ನು ಈ ಬಾರಿಯ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ತಿಳಿಸಿದರು.

ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಮುಖ ಶಾಸಕರ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಸದನದಲ್ಲಿ ಬಿಜೆಪಿ– ಜೆಡಿಎಸ್‌ ಜಂಟಿಯಾಗಿ ಹೋರಾಟ ನಡೆಸಲಿದ್ದು, ಇದಕ್ಕಾಗಿ ಇದೇ 10ರಂದು ಎರಡೂ ಪಕ್ಷಗಳ ಸಮನ್ವಯ ಸಮಿತಿ ಸಭೆಯನ್ನು ಕರೆಯಲಾಗಿದೆ. ಸರ್ಕಾರವನ್ನು ಕಟ್ಟಿ ಹಾಕಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ಹೇಳಿದರು.

ADVERTISEMENT

ಮಳೆಯಿಂದ ಬೆಳೆ ಹಾನಿ, ಬಿಬಿಎಂಪಿಯನ್ನು ಐದು ಭಾಗವಾಗಿ ವಿಭಜಿಸಿರುವುದು, ಖಜಾನೆ ಖಾಲಿ ಆಗಿರುವುದರಿಂದ ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿ ನಿರ್ಮಾಣವಾಗಿರುವುದನ್ನು ಪ್ರಸ್ತಾಪಿಸಲಾಗುವುದು ಎಂದರು.

ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ದೂರುತ್ತಿದ್ದಾರೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರ ಪಾಪರ್‌ ಆಗಿದೆ. ಹೀಗಾಗಿ ಸರ್ಕಾರಿ ನೌಕರರಿಗೆ 2–3 ತಿಂಗಳಿಂದ ಸಂಬಳ ಸಿಗುತ್ತಿಲ್ಲ. ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ ಎಂದು ಅಶೋಕ ಹೇಳಿದರು.

‘ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಡ್ರಗ್‌ ಮಾಫಿಯಾದ ಹಾವಳಿ ವ್ಯಾಪಕವಾಗಿದೆ. ಬ್ರ್ಯಾಂಡ್‌ ಬೆಂಗಳೂರು ಮಾಡಲು ಹಣದ ಕೊರತೆ ಕಾಡುತ್ತಿದೆ. ಇವೆಲ್ಲ ವಿಷಯವನ್ನು ಪ್ರಸ್ತಾಪಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ಮಿತ್ರ ಪಕ್ಷ ಜೆಡಿಎಸ್‌ನ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಮಾತನಾಡಿದ್ದೇನೆ. ಭಾನುವಾರ ನಡೆಯುವ ಸಮನ್ವಯ ಸಮಿತಿ ಸಭೆಗೆ ಅವರು ಬರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ಸಭೆಯಲ್ಲಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನಿಲ್‌ ಕುಮಾರ್‌, ಎಸ್‌. ಸುರೇಶ್‌ಕುಮಾರ್, ಆರಗ ಜ್ಞಾನೇಂದ್ರ, ಕೆ. ಗೋಪಾಲಯ್ಯ, ಸಿ.ಸಿ.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.