ADVERTISEMENT

ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದೇನೆ: ಮುತಾಲಿಕ್

ಬೆಳಗಾವಿ ಲೋಕಸಭೆ ಉಪಚುನಾವಣೆ: ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 13:20 IST
Last Updated 6 ಮಾರ್ಚ್ 2021, 13:20 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌    

ಬಾಗಲಕೋಟೆ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ. ಟಿಕೆಟ್‌ಗಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಟಿಕೆಟ್ ಸಿಗುವ ಭರವಸೆ ಇದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ಇನ್ನೂ ಮೂರು ವರ್ಷ ಅವಧಿ ಇದೆ. ಟಿಕೆಟ್ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದುತ್ವದ ಕೆಲಸ ಮಾಡಲಿದ್ದೇನೆ. ನನಗೆ ಈಗಾಗಲೇ 66 ವರ್ಷ ವಯಸ್ಸು. ಹೀಗಾಗಿ ಇದು ನನ್ನ ಕೊನೆಯ ಚುನಾವಣೆ ಸ್ಪರ್ಧೆ ಎಂದರು.

ಸ್ಪರ್ಧಿಸಲು ಅವಕಾಶ ಕೊಡುವಂತೆ ಮತ್ತೊಮ್ಮೆ ಬಿಜೆಪಿಗೆ ಮನವಿ ಮಾಡುತ್ತೇನೆ. ಒಂದು ವೇಳೆ ಟಿಕೆಟ್ ಸಿಗದೇ ಸುರೇಶ್ ಅಂಗಡಿ ಇಲ್ಲವೇ ಜಗದೀಶ ಶೆಟ್ಟರ್ ಕುಟುಂಬಕ್ಕೋ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸಲಿದ್ದೇನೆ. ಅವರು ಪ್ರಚಾರಕ್ಕೆ ನನ್ನ ಕರೆದರೂ ಹೋಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದರು.

ADVERTISEMENT

ಪೆಟ್ರೋಲ್–ಡೀಸೆಲ್ ಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಜನರು ವಿರೋಧ ಮಾಡುವುದು ತಪ್ಪು ಅಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ನವರು ಮಾಡಿರುವ ಅವ್ಯವಸ್ಥೆಯಿಂದಾಗಿ ಈ ತೊಂದರೆ ತಲೆದೋರಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಪ್ರಧಾನಿ ನರೇಂದ್ರ ಮೋದಿ ಹಂತ ಹಂತವಾಗಿ ಎಲ್ಲವನ್ನೂ ಬಗೆಹರಿಸಲಿದ್ದಾರೆ. ದೇಶದ ಜನತೆ ಇನ್ನೂ ಎರಡು ಅವಧಿಗೆ ಮೋದಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.