ADVERTISEMENT

ಬಸವಕಲ್ಯಾಣ: 18 ಮಂದಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 21:36 IST
Last Updated 24 ಫೆಬ್ರುವರಿ 2021, 21:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಭೆಯನ್ನು ಕ್ಷೇತ್ರದ ಚುನಾವಣಾ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುಧವಾರ ಇಲ್ಲಿ ಸಭೆ ನಡೆಸಿದರು.

ಬಿಜೆಪಿ ಟಿಕೆಟ್‌ ಬಯಸಿರುವ 18 ಕ್ಕೂ ಹೆಚ್ಚು ಆಕಾಂಕ್ಷಿಗಳು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವ ರಣತಂತ್ರದ ಕುರಿತು ಚರ್ಚೆ ನಡೆಯಿತು.

ಟಿಕೆಟ್‌ ಆಕಾಂಕ್ಷಿಗಳ ವಿವರಗಳನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗುವುದು. ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರೇ ಕೈಗೊಳ್ಳುತ್ತಾರೆ. ಅವರು ಯಾವುದೇ ತೀರ್ಮಾನ ಕೈಗೊಂಡರೂ ಸಹ ಎಲ್ಲರೂ ಸಹಮತದಿಂದ ಮತ್ತು ಒಗ್ಗಟ್ಟಿನಿಂದ ವರಿಷ್ಠರು ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಸಮರೋಪಾದಿಯಲ್ಲಿ ಶ್ರಮಿಸುವುದು ಅಗತ್ಯ ಎಂದು ಲಕ್ಷ್ಮಣ ಸವದಿ ಹೇಳಿದರು.

ADVERTISEMENT

‘ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಬಹುಮತದಿಂದ ಗೆಲ್ಲಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳದೇ ಪಕ್ಷದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಸವದಿ ಮನವಿ ಮಾಡಿದರು.

ಸಚಿವರಾದ ಪ್ರಭು ಚವ್ಹಾಣ, ವಿ.ಸೋಮಣ್ಣ, ಬೀದರ್ ಸಂಸದ ಭಗವಂತ ಖೂಬಾ, ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಶಾಸಕ ರಾಜಕುಮಾರ್‌ ಪಾಟೀಲ ತೇಲ್ಕೂರ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.