ADVERTISEMENT

ಮುಸ್ಲಿಂ ಮತದಾರರನ್ನು ಮನವೊಲಿಸುತ್ತೇವೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 15:54 IST
Last Updated 28 ಜನವರಿ 2023, 15:54 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮುಸ್ಲಿಂ ಮತದಾರರನ್ನು ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ, ಕಾಂಗ್ರೆಸ್‌ನವರಂತೆ ಮತ ಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಮುಸ್ಲಿಂ ಮತದಾರರನ್ನು ಸೆಳೆಯುವಂತೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರಿಗೆ ಪ್ರಧಾನಿ ಸೂಚನೆ ನೀಡಿರುವ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ನಾವು ಏನು ಮಾಡಿದ್ದೇವೆ? ಜನರಿಗೆ ಯಾವ ಸೌಲಭ್ಯ ಕಲ್ಪಿಸಿದ್ದೇವೆ? ಎಂಬುದನ್ನು ನಮ್ಮನ್ನು ವಿರೋಧಿಸುವವರು ಸೇರಿದಂತೆ ಎಲ್ಲ ಮತದಾರರಿಗೂ ತಿಳಿಸುವುದು ನಮ್ಮ ಕರ್ತವ್ಯ ಎಂದಷ್ಟೇ ಮೋದಿಯವರು ಹೇಳಿದ್ದಾರೆ’ ಎಂದರು.

‘ನಾನು ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ₹ 37 ಕೋಟಿ ಒದಗಿಸಲಾಗಿದೆ. ಇದು ತುಷ್ಟೀಕರಣ ಅಲ್ಲ. ಮೋದಿಯವರ ಸರ್ಕಾರ ಜಾರಿ ಮಾಡಿದ ಯಾವುದಾದರೂ ಜಾತಿ ಆಧಾರಿತ ಯೋಜನೆ ತೋರಿಸಿ’ ಎಂದು ಕೇಳಿದರು.

ADVERTISEMENT

‘ನಾವು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಿಲ್ಲ. ಕಾಂಗ್ರೆಸ್‌ ತನ್ನ ರಾಜಕೀಯ ನೀತಿಯ ಭಾಗವಾಗಿ ಟಿಪ್ಪು ಸುಲ್ತಾನ್‌ಗೆ ವಿಶೇಷ ಮನ್ನಣೆ ನೀಡಿತ್ತು. ಟಿಪ್ಪು ಸುಲ್ತಾನ್‌ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ ಇಬ್ಬರಲ್ಲಿ ಮೈಸೂರಿಗೆ ಹೆಚ್ಚು ಕೊಡುಗೆ ನೀಡಿದವರು ಯಾರು? ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರ ಹೊರತಾಗಿ ಉಳಿದದ್ದೆಲ್ಲವೂ ಆತನ ಕ್ರೌರ್ಯಗಳೇ. ಕಾಂಗ್ರೆಸ್‌ ಟಿಪ್ಪುವನ್ನು ನಿಜವಾಗಿ ಪ್ರೀತಿಸುವುದಿಲ್ಲ. ಆತನ ಹೆಸರಿನಲ್ಲಿ ಲಾಭ ಪಡೆಯಲು ಯತ್ನಿಸುತ್ತಿದೆ. ನಾವು ಅಂತಹ ಮತಬ್ಯಾಂಕ್‌ ರಾಜಕೀಯ ಮಾಡುವುದಿಲ್ಲ ಎಂದರು.

ಅಂತರರಾಷ್ಟ್ರೀಯ ಸಂಚು: ‘2002ರ ಗುಜರಾತ್‌ ಗಲಭೆಯ ಕುರಿತು ಬಿಬಿಸಿ ವಾಹಿನಿಯು ನಿರ್ಮಿಸಿರುವ ಸಾಕ್ಷ್ಯಚಿತ್ರದ ಹಿಂದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಅಂತರರಾಷ್ಟ್ರೀಯ ಮಟ್ಟದ ಸಂಚು ಇದೆ’ ಎಂದು ಸಿ.ಟಿ. ರವಿ ಆರೋಪಿಸಿದರು.

‘ಸಾಕ್ಷ್ಯಚಿತ್ರವು ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ಒಳಗೊಂಡಿಲ್ಲ. ಗಲಭೆ ಕುರಿತು ವಿಚಾರಣೆ ನಡೆಸಿದ್ದ ನಾನಾವತಿ ಮತ್ತು ಶಾ ಆಯೋಗಗಳು ನೀಡಿದ್ದ ವರದಿಯಲ್ಲಿ ಅಭಿಪ್ರಾಯಗಳನ್ನು ಉಲ್ಲೇಖಿಸಿಲ್ಲ. 2022ರ ಜನವರಿಯಲ್ಲೇ ಸುಪ್ರೀಂ ಕೋರ್ಟ್‌ ಮೋದಿಯವರನ್ನು ಆರೋಪಗಳಿಂದ ಮುಕ್ತಗೊಳಿಸಿದೆ. ನೀವು ಸುಪ್ರೀಂ ಕೋರ್ಟ್‌ ಅನ್ನು ಗೌರವಿಸುತ್ತೀರೊ? ಬ್ರಿಟಿಷರನ್ನೊ? ಕೆಲವರು ಈಗಲೂ ಗುಲಾಮಗಿರಿಯ ಮನಸ್ಥಿತಿ ಹೊಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.