ADVERTISEMENT

ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಆಡಳಿತ ವೈಫಲ್ಯಕ್ಕೆ ಪಾಠ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 21:25 IST
Last Updated 24 ಡಿಸೆಂಬರ್ 2025, 21:25 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ‘ನಾಲ್ಕು ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತ ಸಾಧಿಸಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಕ್ಕೆ ಈ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಫಲಿತಾಂಶದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಮತ್ತು ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಇದು ನಮ್ಮ ಪಕ್ಷದ ಬಲವರ್ಧನೆಯ ಸ್ಪಷ್ಟ ಸಂಕೇತ’ ಎಂದರು.

‘ಅಲ್ಲದೇ ರಾಯಚೂರು ಜಿಲ್ಲೆ ತುರವೀಹಾಳ ಪಟ್ಟಣ ಪಂಚಾಯಿತಿ, ದೊಡ್ಡಬಳ್ಳಾಪುರ ನಗರಸಭೆಯ ತಲಾ ಒಂದು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಚುನಾವಣೆ ನಡೆದ ಒಟ್ಟು 78 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆ, ಅಭಿವೃದ್ಧಿ ಶೂನ್ಯ ಸ್ಥಿತಿ, ಅತಿಯಾದ ತುಷ್ಟೀಕರಣ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ರೈತರ ನಿರ್ಲಕ್ಷ್ಯ, ದಲಿತರಿಗೆ ಮೀಸಲಿಟ್ಟ ಎಸ್‌ಇಎಸ್‌ಪಿ ಟಿಎಸ್‌ಪಿ ಹಣವನ್ನು ದುರುಪಯೋಗ ಮಾಡಿರುವುದನ್ನು ಜನ ಗಮನಿಸಿದ್ದಾರೆ. ಇದು ಜನಾಕ್ರೋಶವಾಗಿ ಪರಿವರ್ತನೆ ಆಗಿದೆ ಎಂದು ತಿಳಿಸಿದರು.

ಬಿ. ಎಲ್. ಸಂತೋಷ್
ನಾಲ್ಕು ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತಿದೆ. ಕಾಂಗ್ರೆಸ್‌ನ ದುರಾಡಳಿತಕ್ಕೆ ಈ ಮೂಲಕ ಜನರು ಉತ್ತರ ನೀಡಿದ್ದಾರೆ
ಆರ್‌.ಅಶೋಕ ವಿರೋಧ ಪಕ್ಷದ ನಾಯಕ
‘ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯನ್ನು ದಿಕ್ಸೂಚಿಯಾಗಿ ತೆಗೆದುಕೊಂಡರೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ
ಎನ್.ರವಿಕುಮಾರ್ ವಿರೋಧ ಪಕ್ಷದ ಮುಖ್ಯಸಚೇತಕ

ವಿಜಯೇಂದ್ರ ತಂಡ ಅಭಿನಂದಿಸಿದ ಸಂತೋಷ್

ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಪಕ್ಷ ಬಹುಮತ ಪಡೆದಿರುವುದಕ್ಕೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಬಿ.ವೈ.ವಿಜಯೇಂದ್ರ ಮತ್ತು ತಂಡವನ್ನು ಅಭಿನಂದಿಸಿದ್ದಾರೆ. ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಮತಪತ್ರಗಳನ್ನು ಬಳಸಿ ನಡೆಸಿದ ಈ ಚುನಾವಣೆಯಲ್ಲಿ ಬಿಜೆಪಿಯು ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಬಹುಮತ ಪಡೆದಿದ್ದು ಎರಡು ಉಪಚುನಾವಣೆಗಳಲ್ಲೂ ಗೆಲುವು ಸಾಧಿಸಿದೆ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.