ADVERTISEMENT

ಡಿ.ಕೆ ಬೆಂಬಲಕ್ಕೆ 70, ಸಿಎಂ ಬೆಂಬಲಕ್ಕೆ ಎಷ್ಟು ಶಾಸಕರು? -ಬಿಜೆಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 14:07 IST
Last Updated 22 ಅಕ್ಟೋಬರ್ 2023, 14:07 IST
<div class="paragraphs"><p>ಬಿಜೆಪಿ ಬಿಡುಗಡೆ ಮಾಡಿದ ಪೋಸ್ಟರ್‌</p></div>

ಬಿಜೆಪಿ ಬಿಡುಗಡೆ ಮಾಡಿದ ಪೋಸ್ಟರ್‌

   

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆಂಬಲಕ್ಕೆ 70 ಶಾಸಕರಿದ್ದರೆ ನಿಮ್ಮ ಬೆಂಬಲಕ್ಕೆ ಎಷ್ಟು ಶಾಸಕರಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.

‘ಇದನ್ನು ಹೇಳುತ್ತಿರುವುದು ನಾವಲ್ಲ. ನಿಮ್ಮದೇ ಪಕ್ಷದ ಶಾಸಕ ಚನ್ನಗಿರಿಯ ಶಿವಗಂಗಾ’ ಎಂದು ಬಿಜೆಪಿ ‘ಎಕ್ಸ್‌’ (ಟ್ವೀಟ್‌) ಮಾಡಿದೆ.

ADVERTISEMENT

‘135 ರಲ್ಲಿ 70 ಜನ ಡಿ.ಕೆ ಬೆಂಬಲಿಗರಾದರೆ ನಿಮ್ಮ ಬೆಂಬಲಿಗರ ಸಂಖ್ಯೆ ಎಷ್ಟು? ಇದನ್ನೆಲ್ಲಾ ಗಮನಿಸಿದರೆ, ನೀವು ಶಾಸಕರ ಆಯ್ಕೆಯಿಂದ ಆದ ಸಿಎಂ ಅಲ್ಲ. ಬದಲಿಗೆ ಹೈಕಮಾಂಡ್‌ಗೆ ಬ್ಲ್ಯಾಕ್‌ ಮೇಲ್‌ ಮಾಡಿ ಅಥವಾ ಬ್ಲ್ಯಾಂಕ್‌ ಚೆಕ್‌ ನೀಡಿ ಸಿಎಂ ಆದವರು ಎಂಬುದಂತು ಸ್ಪಷ್ಟ’ ಎಂದು ವ್ಯಂಗ್ಯವಾಡಿದೆ.

ಡಿ.ಕೆ ಐಟಿ ಕುಣಿಕೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೆಲಂಗಾಣ ಚುನಾವಣೆಗೆ ಹಣ ಕಳುಹಿಸಿ ಹೊರ ರಾಜ್ಯದಲ್ಲಿ ಮತ್ತೊಮ್ಮೆ ತೆರಿಗೆ ಇಲಾಖೆಯ ಕುಣಿಕೆಗೆ ಬಿದ್ದಿದ್ದಾರೆ ಬಿಜೆಪಿ ಕುಟುಕಿದೆ.

ತೆಲಂಗಾಣದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ನಗದು ವಶಪಡಿಸಿಕೊಂಡ ಬೆನ್ನಲ್ಲೇ ಎಕ್ಸ್‌ (ಟ್ವೀಟ್) ಮಾಡಿರುವ ರಾಜ್ಯ ಬಿಜೆಪಿ, ತೆಲಂಗಾಣ ಚುನಾವಣೆ ಉಸ್ತುವಾರಿ ಹೊತ್ತಿರುವ ಡಿ.ಕೆ.ಸಾಹೇಬರು ಕಳೆದ ಒಂದು ವಾರದಿಂದ ತಲೆಬಿಸಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಈಗ ಮತ್ತೊಂದು ಆಘಾತ ಎಂದು ವ್ಯಂಗ್ಯವಾಡಿದೆ.

‘ಕಲೆಕ್ಷನ್‌ ಮಾಸ್ಟರ್‌ಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಹೊರ ರಾಜ್ಯಗಳಿಗೆ ಹಣ ಕಳುಹಿಸಲು ಸ್ಪರ್ಧೆಗೆ ಬಿದ್ದು ಜನರ ಮುಂದೆ ಬೆತ್ತರಾಗಿದ್ದಾರೆ. ಸಿದ್ದರಾಮಯ್ಯ ಅವರು ಆಪ್ತ ಗುತ್ತಿಗೆದಾರ ಅಂಬಿಕಾಪತಿ ಮನೆಯ ಮಂಚದ ಕೆಳಗೆ ರಾಶಿ ರಾಶಿ ಹಣವಿಟ್ಟು ಸಿಕ್ಕಿಬಿದ್ದಿದ್ದರು’ ಎಂದು ಹೇಳಿದೆ.

ಮನೆಯೊಂದು ನಾಲ್ಕು ಬಾಗಿಲು:

‘ಕಾಂಗ್ರೆಸ್‌ನಲ್ಲಿ ಮನೆಯೊಂದು ನಾಲ್ಕು ಬಾಗಿಲು ಆಗಿದೆ. ಮರ್ಯಾದೆ–ಮುಜುಗರ ಇವುಗಳನ್ನು ಮೂಟೆ ಕಟ್ಟಿಟ್ಟ ನಂತರವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಇದು ನಮ್ಮ ಆರೋಪವಲ್ಲ. ಕಾಂಗ್ರೆಸಿಗರೇ ಒಪ್ಪಿಕೊಂಡಿರುವ ಸತ್ಯ’ ಎಂದು ಬಿಜೆಪಿ ಹೇಳಿದೆ.

ಸಚಿವೆ ಲಕ್ಷ್ಮಿ ಅವರನ್ನು ಹುಡುಕಿಕೊಡಿ

‘ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಹಣ ಕೊಡದೇ ವಂಚಿಸಿ ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಕಾಣೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ’ ಎಂದು ಬಿಜೆಪಿ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.