ADVERTISEMENT

ಬಿಜೆಪಿಯ 40 ಪರ್ಸೆಂಟ್ ಸರ್ಕಾರವು ಅವರದೇ ಕಾರ್ಯಕರ್ತನ ಬಲಿ ಪಡೆದಿದೆ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2022, 14:19 IST
Last Updated 12 ಏಪ್ರಿಲ್ 2022, 14:19 IST
   

ನವದೆಹಲಿ: ಕರ್ನಾಟಕದಲ್ಲಿರುವ ಬಿಜೆಪಿಯ 40 ಪರ್ಸೆಂಟ್ ಕಮೀಷನ್ ಸರ್ಕಾರವು ತನ್ನದೇ ಕಾರ್ಯಕರ್ತನ ಬಲಿ ಪಡೆದಿದೆ ಎಂದು ಉಡುಪಿಯ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಗುತ್ತಿಗೆದಾರರರು ಪ್ರಧಾನಿಗೆ ದೂರು ನೀಡಿದ್ದರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ರಾಹುಕ್ ಗಾಂಧಿ ಕಿಡಿಕಾರಿದ್ದಾರೆ.

ಈ ಕೃತ್ಯದಲ್ಲಿ ಸಿಎಂ ಮತ್ತು ಪಿಎಂ ಭಾಗಿದಾರರು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಏನಿದು ಘಟನೆ?

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಈಚೆಗೆ ಶೇ 40ರಷ್ಟು ಪರ್ಸೆಂಟೇಜ್ ಆರೋಪ ಮಾಡಿ ಸುದ್ದಿಯಾಗಿದ್ದ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರೂ ಆಗಿರುವ ಸಂತೋಷ್ ಪಾಟೀಲ‌ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಸಂತೋಷ್ ಪಾಟೀಲ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಶಾಂಭವಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಅವರ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿದಾಗ ಶಾಂಭವಿ ಲಾಡ್ಜ್‌ನಲ್ಲಿ ಸಂತೋಷ್ ಪಾಟೀಲ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತೋಷ್ ಪಾಟೀಲ ‘ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ’. ಸಚಿವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ, ಮಕ್ಕಳಿಗೆ ಪ್ರಧಾನಿ, ಮುಖ್ಯಮಂತ್ರಿ , ಬಿ.ಎಸ್. ಯಡಿಯೂರಪ್ಪ ಸಹಾಯ ಮಾಡಬೇಕು' ಎಂದು ಬರೆದಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

'ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ ಯಾರೆಂಬುದೇ ನನಗೆ ಗೊತ್ತಿಲ್ಲ. ಆತ ನಮ್ಮ ಇಲಾಖೆಯಿಂದ ಯಾವುದೇ ಟೆಂಡರ್ ಪಡೆದುಕೊಂಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

‘ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ, ನಾನು ರಾಜೀನಾಮೆ ನೀಡುವುದಿಲ್ಲ' ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.