ADVERTISEMENT

ಸರ್ಕಾರ ಪತನಕ್ಕೆ ಬಿಜೆಪಿ ತಂತ್ರ | ಇನ್ನಷ್ಟು ಶಾಸಕರ ರಾಜೀನಾಮೆ ಕೊಡಿಸಲು ತಯಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 1:59 IST
Last Updated 10 ಜುಲೈ 2019, 1:59 IST
   

ಬೆಂಗಳೂರು: ಈಗ ಆರಂಭವಾಗಿರುವ ಶಾಸಕರ ರಾಜೀನಾಮೆ ಸರಣಿಯನ್ನು ಸಾಧ್ಯವಾದಷ್ಟೂ ಮುಂದುವರಿಸಿ, ಮುಖ್ಯಮಂತ್ರಿ ಪದತ್ಯಾಗ ಮಾಡುವಷ್ಟರ ಮಟ್ಟಿಗೆ ಮೈತ್ರಿ ಕೂಟವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಯಾರಿ ನಡೆಸಿದೆ.

ಸಭಾಧ್ಯಕ್ಷರ ನಡೆ ಸದ್ಯದ ಮಟ್ಟಿಗೆ ಹಿನ್ನಡೆ ತಂದಿದೆ. ಸುದೀರ್ಘ ಅವಧಿಯವರೆಗೆ ರಾಜೀನಾಮೆ ಅಂಗೀಕರಿಸದೇ ಇರಲು ಸಾಧ್ಯವಿಲ್ಲ. 8 ಅಥವಾ 10 ದಿನಗಳ ಬಳಿಕವಾದರೂ ಅಂಗೀಕಾರ ಮಾಡಲೇಬೇಕು. ಅಲ್ಲಿಯವರೆಗೆ, ‘ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ, ಮುಖ್ಯಮಂತ್ರಿ ರಾಜೀನಾಮೆ ಕೊಡಲಿ’ ಎಂದು ಪಟ್ಟು ಹಿಡಿದು ಹೋರಾಟ ನಡೆಸುವುದು ಬಿಜೆಪಿ ನಾಯಕರ ಸದ್ಯದ ಆಲೋಚನೆ.

14 ಶಾಸಕರು ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಬುಧವಾರ ಈ ಯಾದಿಗೆ ಇನ್ನೂ 6ರಿಂದ 9 ಜನ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ನಾಯಕರದ್ದಾಗಿದೆ. ಹೀಗೆ ಇನ್ನಷ್ಟು ಶಾಸಕರು ರಾಜೀನಾಮೆ ಕೊಟ್ಟರೆ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ. ಇದೇ 12ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ವಿಶ್ವಾಸ ಮತ ಸಾಬೀತುಪಡಿಸುವಂತೆ ಆಗ್ರಹಿಸಿ ಸದನದಲ್ಲಿ ಹೋರಾಟ ನಡೆಸುವ ಆಲೋಚನೆ ಪ‍ಕ್ಷದ ಪ್ರಮುಖರದ್ದಾಗಿದೆ.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕರ ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ವಿಶ್ವಾಸ ಸಾಬೀತುಪಡಿಸಲು ಅವರಿಗೆ ನಿರ್ದೇಶನ ನೀಡಿ. ಅವರು ಒಪ್ಪದೇ ಇದ್ದರೆ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಕಾರಣ ಮುಂದೊಡ್ಡಿ ವಿಧಾನಸಭೆಯನ್ನು ಅಮಾನತ್ತಿಲ್ಲಿಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡುವುದು ಪಕ್ಷದ ನಾಯಕರ ಚಿಂತನೆಯಾಗಿದೆ ಎಂದು ಮೂಲಗಳು ಹೇಳಿವೆ.

ಮೊದಲೇ ಈ ಮಾರ್ಗ ಅನುಸರಿಸಿದರೆ, ಬಿಜೆಪಿಯು ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿತು ಎಂದು ಕಾಂಗ್ರೆಸ್–ಜೆಡಿಎಸ್‌ ನಾಯಕರು ಬೀದಿ ಹೋರಾಟ ನಡೆಸಲಿದ್ದಾರೆ. ಶಾಸಕರ ರಾಜೀನಾಮೆಯಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಹೇಳಿಕೊಳ್ಳುತ್ತಿರುವುದರಿಂದ ಸದ್ಯಕ್ಕೆ ಈ ಹಾದಿ ಅನುಸರಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಪಕ್ಷದಲ್ಲಿದೆ. ಹೀಗಾಗಿ, ತಕ್ಷಣಕ್ಕೆ ಮಾರ್ಗ ಹಿಡಿಯುವುದಿಲ್ಲ ಎಂದು ಮೂಲಗಳು ವಿವರಿಸಿವೆ.

ಅದರ ಬದಲು, ಶಾಸಕರ ರಾಜೀನಾಮೆಯನ್ನು 22 ದಾಟಿಸುವುದು. ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಅದಕ್ಕೂ ಬಗ್ಗದೇ ಇದ್ದರೆ, ಸದನ ಆರಂಭವಾದ ಕೂಡಲೇ ಸಭಾಧ್ಯಕ್ಷರ ವಿರುದ್ಧವೇ ಅವಿಶ್ವಾಸ ಮಂಡಿಸುವ ಮತ್ತೊಂದು ದಾರಿಯನ್ನೂ ಇಟ್ಟುಕೊಳ್ಳಲಾಗಿದೆ. ಅವಿಶ್ವಾಸ ನಿರ್ಣಯದಲ್ಲಿ ಆಡಳಿತ ಪಕ್ಷ ಸೋಲುಕಂಡರೆ ಅನಿವಾರ್ಯವಾಗಿ ಸರ್ಕಾರವೂ ಹೋಗಲಿದೆ. ಕೊನೆಯ ಅಸ್ತ್ರವಾಗಿ ಅದನ್ನೂ ಬಳಸಲಾಗುತ್ತದೆ ಎಂದು ನಾಯಕರೊಬ್ಬರು ತಿಳಿಸಿದರು.

*ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದೇವೆ

ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.