
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ವಿಶ್ವ ಗುರು ಅಲ್ಲ, ವಿಷ ಗುರು‘ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತ ಆರ್ಯರ ನಾಡು ಎಂದು ವಿಷ ಗುರು ಇಸ್ರೇಲ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಉರ್ದು ಭಾಷೆ ಜನ್ಮ ತಾಳಿದ್ದು ಉತ್ತರ ಪ್ರದೇಶದ ಮೀರತ್‌ನಲ್ಲಿ ಎಂಬುದು ವಿಷ ಗುರುವಿಗೆ ಗೊತ್ತಿಲ್ಲ. ಉರ್ದು ನಮ್ಮ ಭಾಷೆ. ಅದಕ್ಕೂ ಬಣ್ಣ ಲೇಪ ಮಾಡಿದ್ದಾರೆ. ತರಕಾರಿಗೂ ಧರ್ಮ ಲೇಪ ಮಾಡಿದ್ದಾರೆ. ಉದ್ಯೋಗ ಇಲ್ಲದಿದ್ದಾಗ ಬಡಗಿ ಮಾಡುವ ಕೆಲಸದಂತಿದೆ ಪ್ರಧಾನಿ ಧೋರಣೆ‘ ಎಂದು ವ್ಯಂಗ್ಯವಾಡಿದರು.
‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರ ಮೋದಿ 2014ರಲ್ಲಿ ಭರವಸೆ ನೀಡಿದ್ದರು. 11 ವರ್ಷಗಳಲ್ಲಿ 22 ಕೋಟಿ ಉದ್ಯೋಗ ಕೊಡಬೇಕಿತ್ತು. ಆ ಬಗ್ಗೆ ಇಲ್ಲಿಯವರೆಗೂ ಚಕಾರ ಎತ್ತಿಲ್ಲ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿರುವ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಮೊದಲು ಅವರು ವಿಷ ಗುರುವಿನ ಹತ್ತಿರ ಹೋಗಿ ಉದ್ಯೋಗ ಸೃಷ್ಟಿಸುವಂತೆ ಹೇಳಲಿ‘ ಎಂದರು.
‘ಕೇಂದ್ರ ಸರ್ಕಾರದಲ್ಲಿ 40 ಲಕ್ಷ ಹುದ್ದೆಗಳು ಖಾಲಿ ಇವೆ. ಗೃಹ, ರೈಲ್ವೆ ಹಾಗೂ ರಕ್ಷಣಾ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಸೇನೆಯಲ್ಲಿ 1.55 ಲಕ್ಷ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ದೇಶಭಕ್ತಿ ಹಾಗೂ ದೇಶಸೇವೆ ಎಂದು ಭಾಷಣ ಮಾಡುವ ಜನರು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ‘ ಎಂದು ಅವರು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.