ADVERTISEMENT

‘ಹಿಂದೂ ರಾಷ್ಟ್ರ’ಕ್ಕೆ ಪ್ರತ್ಯೇಕ ಸಂವಿಧಾನ ‘ದೇಶ ದ್ರೋಹ’: ಬಿ.ಕೆ. ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 14:14 IST
Last Updated 26 ಜನವರಿ 2025, 14:14 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್   

ಬೆಂಗಳೂರು: ‘ಗಣ ರಾಜ್ಯದ ಸಂಭ್ರಮದಲ್ಲಿರುವ ದೇಶದಲ್ಲಿ ‘ಹಿಂದೂ ರಾಷ್ಟ್ರ’ಕ್ಕೆ ಪ್ರತ್ಯೇಕ ‘ಸಂವಿಧಾನ’ ಸಿದ್ಧಪಡಿಸಿರುವ ಆಘಾತಕಾರಿ ಹಾಗೂ ಅತ್ಯಂತ ಅಪಾಯಕಾರಿ ಬೆಳವಣಿಗೆ ನಡೆದಿರುವುದು ದೇಶ ಭಾರಿ ಗಂಡಾಂತರ ಎದುರಿಸುವ ಮುನ್ಸೂಚನೆಯಂತಿದೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

‘ಫೆ. 3‌ರಂದು ಈ ‘ಸಂವಿಧಾನ’ದ ಸಂಪೂರ್ಣ 501 ಪುಟಗಳು ಬಹಿರಂಗ ಆಗಲಿದೆ ಎನ್ನಲಾಗಿದ್ದು, ರಾಷ್ಟ್ರಪತಿ ತಕ್ಷಣ ಮಧ್ಯಪ್ರವೇಶಿಸಿ ಯಾವ ಕಾರಣಕ್ಕೂ ಇದು ಬಹಿರಂಗಗೊಳ್ಳದಂತೆ ಹಾಗೂ ದೇಶದ ಸ್ವಾಸ್ಥ್ಯವನ್ನು ಹಾಳುಗೆಡವದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.  

‘ಪ್ರತಿಯೊಬ್ಬ ಭಾರತೀಯರ ಸ್ವಾಭಿಮಾನ, ಗೌರವ ಹಾಗೂ ಘನತೆಯ ಬದುಕಿನ ಹಕ್ಕು ನೀಡಿರುವ ಸಂವಿಧಾನವನ್ನೇ ಗೌಣಗೊಳಿಸುವ ಹಾಗೂ ಅಪಮಾನಗೊಳಿಸುವ ಪಟ್ಟಭದ್ರ ಹಿತಾಸಕ್ತಿಗಳ ವ್ಯವಸ್ಥಿತ ಸಂಚು ಹೊರಬರುತ್ತಲೇ ಇದೆ. ಸಂವಿಧಾನ ವಿರೋಧಿ ದುಷ್ಕರ್ಮಿಗಳ ಇಂತಹ ಕೃತ್ಯವನ್ನು ಹಿಮ್ಮೆಟ್ಟಿಸದಿದ್ದರೆ ಬಹುತ್ವ ಹಾಗೂ ಏಕತೆಯ ಭಾರತ ಉಳಿಯುವುದಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಾತ್ಯತೀತ ರಾಷ್ಟ್ರವೆಂದು ಒಪ್ಪಿಕೊಂಡ ದೇಶದ ಸಂವಿಧಾನದಲ್ಲಿ, ಹಿಂದೂ ರಾಷ್ಟ್ರ ಎಂದು ಘೋಷಿಸುವುದು, ಪ್ರತ್ಯೇಕ ಸಂವಿಧಾನ ರಚಿಸುವುದು ದೇಶದ್ರೋಹದ ಕೃತ್ಯ’ ಎಂದೂ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.