ADVERTISEMENT

ಶಾ ಹೇಳಿಕೆ ಖಂಡಿಸಿ ಇಂದಿನಿಂದ ಪ್ರತಿಭಟನೆ– ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 23:19 IST
Last Updated 22 ಡಿಸೆಂಬರ್ 2024, 23:19 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್   

ಬೆಂಗಳೂರು: ‘ಬಿಜೆಪಿ, ಸಂಘ ಪರಿವಾರದವರು ವ್ಯಸನಿಗಳು, ವಿಕೃತ ಮನಸ್ಸಿನವರು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ದೇಶಪೂರ್ವಕವಾಗಿ, ಲೆಕ್ಕಾಚಾರ ಹಾಕಿಕೊಂಡೇ ಅಂಬೇಡ್ಕರ್ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿರುವ ಹೇಳಿಕೆ ಖಂಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು.

‘ಅಂಬೇಡ್ಕರ್‌ ಕುರಿತ ಆರೆಸ್ಸೆಸ್ ಅಭಿಪ್ರಾಯವನ್ನೇ ಶಾ ತಮ್ಮ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಪ್ರಜಾಪ್ರಭುತ್ವದ ದೇಗುಲದೊಳಗೆ ನಿಂತು ಅವರು ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ. ಅವರ ಹೇಳಿಕೆ ಬಗ್ಗೆ ಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆ. ಆದರೆ, ಬಿಜೆಪಿಯವರ ಗದ್ದಲದಿಂದ ಸಾಧ್ಯವಾಗಿಲ್ಲ. ಶಾ ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಿಜೆಪಿಯವರಿಗೆ ಬಡವರು, ಹಿಂದುಳಿದವರು, ದಲಿತರು ಸೇರಿ ಕೆಳಹಂತದ ಜನ ಬೇಕಾಗಿಲ್ಲ. ತಮ್ಮ ಅಡಿಯಾಳಾಗಿಯೇ ನೋಡುವ ಹುನ್ನಾರವಿದು’ ಎಂದೂ ಆರೋಪಿಸಿದರು.

‘ಸಾವರ್ಕರ್‌ ಮತ್ತು ಗೋಳ್ವಾಲ್ಕರ್‌ ಕೂಡ ಅಂಬೇಡ್ಕರ್‌ ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇಂತಹದ್ದೇ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದರು. ಈ ನಾಯಕರ ಹಿಂಬಾಲಕರಾದ ಶಾ ಇದೀಗ ಅಂಬೇಡ್ಕರ್‌ ಅವರ ಹೆಸರು ಹೇಳುವುದನ್ನು ಫ್ಯಾಷನ್‌ ಎಂದು ಕರೆಯುವ ಮೂಲಕ, ಅಂಬೇಡ್ಕರ್‌ ಕುರಿತು ಸಂಘದ ಆಂತರ್ಯದಲ್ಲಿರುವ ಅಸಹನೆಯನ್ನು ಹೊರಹಾಕಿದ್ದಾರೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.