ಡಿ.ಕೆ. ಶಿವಕುಮಾರ್, ಮಹೇಶ್ ಶೆಟ್ಟಿ ತಿಮರೋಡಿ
ಬೆಂಗಳೂರು: ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಆರೋಪ ಮಾಡಿದವನನ್ನು (ಮಹೇಶ್ ಶೆಟ್ಟಿ ತಿಮರೋಡಿ) ಒದ್ದು ಒಳಗೆ ಹಾಕಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಅವರು ಮಾತನಾಡಿದರು.
‘ಆರೋಪ ಮಾಡಲು ಆತನ ಬಳಿ ದಾಖಲೆ ಏನಿದೆ? ನಮ್ಮ ನಡುವೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು. ಆದರೆ ನಮ್ಮ ವಿರೋಧಿಗಳ ಬಗ್ಗೆ ಏನೇನೋ ಮಾತನಾಡುತ್ತಾನೆ ಎಂದು ನಾವು ಖುಷಿಪಡುವುದಲ್ಲ’ ಎಂದಿದ್ದಾರೆ.
‘ಇಂದು ಅವರ ಬಗ್ಗೆ ಮಾತನಾಡಿದವರು, ನಾಳೆ ನಮ್ಮ ಬಗ್ಗೆಯೂ ಮಾತನಾಡುತ್ತಾರೆ. ಈ ಹಿಂದೆಯೂ ಮುಖ್ಯಮಂತ್ರಿ ಹಾಗೂ ನನ್ನ ವಿರುದ್ಧವೂ ಸುಳ್ಳು ಆರೋಪ ಮಾಡಿದ್ದಾರೆ. ಈ ರಾಜ್ಯದಲ್ಲಿ ಯಾರ ಸ್ವಾಭಿಮಾನಕ್ಕೂ ಧಕ್ಕೆ ಬಾರದಂತೆ ಕೆಲಸ ಮಾಡಬೇಕು. ರಾಜಕೀಯ ಮಾಡಲಿ, ರಾಜಕೀಯವಾಗಿ ಆರೋಪಗಳನ್ನು ಮಾಡಲಿ. ಆದರೆ ಆಧಾರಗಳನ್ನಿಟ್ಟುಕೊಂಡು ಆರೋಪ ಮಾಡಲಿ’ ಎಂದರು.
ಧರ್ಮಸ್ಥಳದಲ್ಲಿ ಸಂಗ್ರಹವಾಗುವ ಹುಂಡಿ ಹಣದ ಲೆಕ್ಕ ಕೊಡಬೇಕು ಎನ್ನುವ ಸಮಾನ ಮನಸ್ಕ ವೇದಿಕೆಯ ಆಗ್ರಹದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಇದನ್ನು ನೋಡಲು ಆದಾಯ ತೆರಿಗೆ ಇಲಾಖೆಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.