ADVERTISEMENT

‘ಕರಾಳ ದಿನ ಆಚರಿಸುವುದು ದೇಶದ್ರೋಹದ ಕೆಲಸ’

ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್‌. ಮಂಜುನಾಥ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:24 IST
Last Updated 3 ಫೆಬ್ರುವರಿ 2020, 12:24 IST
ಕೆ.ಎಲ್‌. ಮಂಜುನಾಥ
ಕೆ.ಎಲ್‌. ಮಂಜುನಾಥ   

ಬೆಳಗಾವಿ: ‘ರಾಜ್ಯೋತ್ಸವ ದಿನದಂದು ‘ಕರಾಳ ದಿನ’ ಆಚರಿಸಲು ಯಾರಿಗೂ ಅವಕಾಶವಿಲ್ಲ. ಆ ರೀತಿ ಯಾರಾದರೂ ಮಾಡಿದರೆ ಅದು ದೇಶದ್ರೋಹದ ಕೆಲಸವಾಗುತ್ತದೆ. ಇಂತಹವರ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಬಹುದು’ ಎಂದು ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್‌. ಮಂಜುನಾಥ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ರಾಜ್ಯೋತ್ಸವ ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘1956ರಲ್ಲಿ ಕರ್ನಾಟಕ ಏಕೀಕರಣ ನಂತರ ಇಲ್ಲಿ ಹುಟ್ಟಿದವರೆಲ್ಲ ಕನ್ನಡಿಗರಾಗಿದ್ದಾರೆ. ಅವರ ಮಾತೃಭಾಷೆ ಬೇರೆಯಾಗಿರಬಹುದು. ಆದರೂ, ಅವರು ಕನ್ನಡಿಗರಾಗಿದ್ದಾರೆ. ರಾಜ್ಯದ ಸೌಲಭ್ಯ ಪಡೆದು, ರಾಜ್ಯದ ವಿರುದ್ಧವೇ ಕಾರ್ಯಕ್ರಮ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅಂತಹವರ ವಿರುದ್ಧ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬಹುದು’ ಎಂದರು.

ADVERTISEMENT

ಚರ್ಚಿಸಿ ತೀರ್ಮಾನ

‘ರಾಜ್ಯದ ಗಡಿಯೊಳಗೆ ಬಂದು ಪ್ರಚೋದನಾ ಹೇಳಿಕೆ ನೀಡದಂತೆ ಮಹಾರಾಷ್ಟ್ರದ ಜನಪ್ರತಿನಿಧಿಗಳಿಗೆ ತಡೆಯಾಜ್ಞೆ (ಇಂಜಕ್ಷನ್‌) ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ರಾಜಕೀಯ ಇಚ್ಛಾಶಕ್ತಿ

‘ಅಂತರರಾಜ್ಯ ನದಿಗಳ ವ್ಯಾಜ್ಯ ಕುರಿತಂತೆ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಸೂಚನೆ ಪ್ರಕಟವಾಗುತ್ತಿಲ್ಲ. ನೀರು ಹಂಚಿಕೆ ಮಾಡಿ ನೀಡಿದ ತೀರ್ಪುಗಳೂ ಜಾರಿಯಾಗುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ’ ಎಂದು ಅವರು ಮಹಾದಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

ಆಯೋಗದ ಸದಸ್ಯರಾದ ಜೀನದತ್ತ ದೇಸಾಯಿ, ಎಂ.ಬಿ. ಝಿರಲಿ, ಎಸ್‌.ಎಂ. ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.