ಬೆಂಗಳೂರು: ರಾಜ್ಯದಲ್ಲಿ ಸುಮಾರು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಗೆ ಕಪ್ಪುತಲೆ ಹುಳುವಿನಿಂದ ಹಾನಿಯಾಗಿದ್ದು, ಈ ಸಮಸ್ಯೆಯ ಕುರಿತು ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಇದಕ್ಕೆ ₹25 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.
ಸಮೀಕ್ಷೆಗಾಗಿ ಪ್ರತ್ಯೇಕವಾಗಿ ಬೆಳೆ ಸಮೀಕ್ಷೆ ತಂತ್ರಾಂಶ ಅಭಿವೃದ್ಧಿಪಡಿಸಲು ಮತ್ತು ಸಮೀಕ್ಷಾ ವರದಿಯ ಬಳಿಕ ಸಸ್ಯ ಸಂರಕ್ಷಣಾ ಕ್ರಮಗಳ ಶಿಫಾರಸು ಸೇರಿದಂತೆ ಸೂಕ್ತ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲು ಇಲಾಖೆ ಮುಂದಾಗಿದೆ.
ಕಪ್ಪುತಲೆ ಹುಳು ಬಾಧೆ ನಿಯಂತ್ರಣದ ತುರ್ತು ಅಗತ್ಯದ ಬಗ್ಗೆ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ, ತಜ್ಞರ ವರದಿ ಪಡೆದು ಪ್ರಸ್ತಾವ ಸಲ್ಲಿಸುವಂತೆ ತೋಟಗಾರಿಕಾ ಇಲಾಖೆಗೆ ಸೂಚಿಸಿದ್ದರು. ಈ ಕುರಿತಂತೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ತೋಟಗಾರಿಕೆ ನಿರ್ದೇಶನಾಲಯವು ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಮಾಹಿತಿ ನೀಡಿದೆ.
ರಾಜ್ಯದಲ್ಲಿ 27.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ವಾರ್ಷಿಕ 223.18 ಲಕ್ಷ ಟನ್ ಉತ್ಪಾದನೆಯಾಗಿದೆ. ಈ ಪೈಕಿ, ತೋಟದ ಬೆಳೆಗಳು ಶೇಕಡಾ 53.26ರಷ್ಟು ವಿಸ್ತೀರ್ಣವನ್ನು ಹೊಂದಿವೆ. ತೆಂಗನ್ನು 7.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 34.79 ಲಕ್ಷ ಟನ್ ಉತ್ಪಾದನೆಯಾಗಿದೆ. ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅಧಿಕ ಉಷ್ಣಾಂಶ ಇದ್ದುದರಿಂದ ತೆಂಗಿನಲ್ಲಿ ಕಪ್ಪುತಲೆ ಹುಳುವಿನ ಬಾಧೆ ಹೆಚ್ಚಾಗಿ ಕಂಡುಬಂದಿದ್ದು, ಸುಮಾರು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾಧೆಯಿಂದ ಹಾನಿಯಾಗಿರುವುದಾಗಿ ಇಲಾಖೆ ಅಂದಾಜಿಸಿದೆ.
ತೆಂಗಿನ ಕಪ್ಪುತಲೆ ಹುಳು ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ಕೈಗೊಂಡು ಅದರ ಆಧಾರದಲ್ಲಿ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸುವ ಬಗ್ಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಇಲಾಖೆಯ ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ, ಕಪ್ಪುತಲೆ ಹುಳು ಬಾಧೆಯ ನಿಯಂತ್ರಣಕ್ಕಾಗಿ ಕ್ರಮಗಳ ಕುರಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
Quote - ತೆಂಗಿಗೆ ಬಾಧಿಸಿರುವ ಕಪ್ಪುತಲೆ ಹುಳು ಬಾಧೆಯ ಕುರಿತು ತೋಟಗಾರಿಕಾ ಇಲಾಖೆ ತ್ವರಿತ ಗತಿಯಲ್ಲಿ ಸಮೀಕ್ಷೆ ನಡೆಸಿ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ದಿನೇಶ್ ಗೂಳಿಗೌಡ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.