ADVERTISEMENT

ಎಫ್‌ಎಸ್‌ಎಲ್‌ನಲ್ಲಿ ಸ್ಫೋಟ: 7 ಮಂದಿಗೆ ಗಾಯ

ರಾಸಾಯನಿಕ ವಸ್ತುವಿನ ಪರೀಕ್ಷೆ ವೇಳೆ ಅವಘಡ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:38 IST
Last Updated 29 ನವೆಂಬರ್ 2019, 19:38 IST
ಸ್ಫೋಟ ಸಂಭವಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯ
ಸ್ಫೋಟ ಸಂಭವಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯ   

ಬೆಂಗಳೂರು: ನಗರದ ಮಡಿವಾಳದಲ್ಲಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಶುಕ್ರವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ರಾಯಚೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ ರಾಸಾಯನಿಕ ವಸ್ತುವಿನ ಪರೀಕ್ಷೆ ವೇಳೆ ಈ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಪ್ರಯೋಗಾಲಯದ ಕಟ್ಟೆ ಮೇಲಿನ ಕಲ್ಲುಗಳು ಹಾಗೂ ಪೀಠೋಪಕರಣಗಳು ಒಡೆದಿವೆ.

‘ಮಧ್ಯಾಹ್ನ 2.30ರಿಂದ 2.45 ಗಂಟೆ ಸಮಯದಲ್ಲಿ ಸ್ಫೋಟ ಸಂಭವಿಸಿರುವುದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ. ವೈಜ್ಞಾನಿಕ ಅಧಿಕಾರಿಗಳಾದ ಶ್ರೀನಾಥ್, ನವ್ಯಾ, ವಿಶ್ವನಾಥ್, ವಿಷ್ಣುವಲ್ಲಭ್, ಬಸವಪ್ರಭು, ಮಂಜುನಾಥ್, ದಲಾಯತ್ ಅಂತೋನಿ ಪ್ರಭು ಎಂಬುವರಿಗೆ ಗಾಯಗಳಾಗಿವೆ. ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದರು.

ADVERTISEMENT

‘ಪ್ರಯೋಗಾಲಯ ಪ್ರವೇಶ ನಿರ್ಬಂಧಿಸಲಾಗಿದೆ. ಸುತ್ತಲೂ ಭದ್ರತೆ ಕಲ್ಪಿಸಲಾಗಿದೆ. ಎಫ್‌ಎಸ್‌ಎಲ್‌ ನಿರ್ದೇಶಕ ಅಭಿನವ್ ಖರೆ ಅವರಿಂದ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ರಾಯಚೂರಿನಲ್ಲಿ ಮೃತಪಟ್ಟಿದ್ದ: ‘ರಾಯಚೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಸ್ಫೋಟ ಸಂಭವಿಸಿತ್ತು. ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ರಾಸಾಯನಿಕ ವಸ್ತುವನ್ನು ಸಂಗ್ರಹಿಸಿದ್ದ ಪೊಲೀಸರು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ವೈಜ್ಞಾನಿಕ ಅಧಿಕಾರಿ ಶ್ರೀನಾಥ್ ಅವರು ರಾಸಾಯನಿಕದ ಮಾದರಿಯನ್ನು ಕೈಯಲ್ಲಿ ಹಿಡಿದು ಪರೀಕ್ಷೆ ನಡೆಸುತ್ತಿದ್ದರು. ಅವರ ಪಕ್ಕವೇ ನವ್ಯಾ ಇದ್ದರು. ಉಳಿದವರು ಸಮೀಪದಲ್ಲೇ ಕೆಲಸದಲ್ಲಿ ತೊಡಗಿದ್ದರು. ಅದೇ ಸಂದರ್ಭದಲ್ಲಿ ದಿಢೀರ್ ಸ್ಫೋಟ ಸಂಭವಿಸಿತ್ತು’ ಎಂದು ತಿಳಿಸಿದರು.

‘ಶ್ರೀನಾಥ್ ಕೈಗೆ ಗಾಯವಾಗಿ, ಎರಡು ಬೆರಳುಗಳು ತುಂಡಾಗಿವೆ. ನವ್ಯಾ ಅವರ ಕಣ್ಣಿಗೂ ಪೆಟ್ಟಾಗಿದೆ. ಉಳಿದವರಿಗೆ ಸಣ್ಣ– ಪುಟ್ಟ ಗಾಯಗಳಾಗಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಪ್ರಯೋಗಾಲಯದ ನಿರ್ದೇಶಕ ಅಭಿನವ್ ಖರೆ ಹಾಗೂ ಮೇಲ್ವಿಚಾರಕಿ ವಾಣಿ ಅವರು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.