ADVERTISEMENT

ಅಂಧ ಮಕ್ಕಳ ಸರ್ಕಾರಿ ವಸತಿ ಶಾಲೆ ಸಿದ್ಧ

ರವಿ ಎಸ್.ಬಳೂಟಗಿ
Published 17 ಸೆಪ್ಟೆಂಬರ್ 2019, 20:00 IST
Last Updated 17 ಸೆಪ್ಟೆಂಬರ್ 2019, 20:00 IST
ಹುಬ್ಬಳ್ಳಿಯ ಆನಂದನಗರದಲ್ಲಿ ಹಸಿರು ಹಾಗೂ ಹೂವುಗಳಿಂದ ಕಂಗೊಳಿಸುತ್ತಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ
ಹುಬ್ಬಳ್ಳಿಯ ಆನಂದನಗರದಲ್ಲಿ ಹಸಿರು ಹಾಗೂ ಹೂವುಗಳಿಂದ ಕಂಗೊಳಿಸುತ್ತಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ   

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಸ್ಥಳಾಂತರಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಎರಡು ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ಸುಂದರ ಕ್ಯಾಂಪಸ್ ಇದೇ ತಿಂಗಳು ಅಧಿಕೃತವಾಗಿ ಉದ್ಘಾಟನೆ ಆಗಲಿದೆ.

1955ರಲ್ಲಿ ಮುಂಬೈ ಪ್ರೆಸಿಡೆನ್ಸಿಯಿಂದ ಅನುಮತಿ ಪಡೆದು, ಮಠದ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದ್ದ ಶಾಲೆಗೆ, ಸ್ವಂತ ಸೂರು ಹೊಂದುವ ಕನಸು ಹಲವು ದಶಕಗಳು ಕಳೆದರೂ ನನಸಾಗಿರಲಿಲ್ಲ. 2014ರಲ್ಲಿ ಜಾಗ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2016ರಲ್ಲೇ ಕಾಮಗಾರಿ ಪೂರ್ಣಗೊಂಡರೂ ಸ್ಥಳಾಂತರ ಹಾಗೂ ಹಸ್ತಾಂತರ ನನೆಗುದಿಗೆ ಬಿದ್ದಿತ್ತು. ಈಗ ಎಲ್ಲ ತೊಡಕುಗಳು ನಿವಾರಣೆಯಾಗಿದ್ದು, ತಿಂಗಳ ಹಿಂದೆಯೇ ಮಕ್ಕಳಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಪಾಠ-ಆಟವೂ ಸಾಗಿದೆ. ಅಧಿಕೃತ ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ.

ಅಂಧಮಕ್ಕಳ ಸ್ನೇಹಿ ಕಟ್ಟಡ
ಆನಂದನಗರದ ಫರಾನ್ ಮೌಂಟ್ ಕಾಲೇಜು ಸಮೀಪ ₹3 ಕೋಟಿ ವೆಚ್ಚದಲ್ಲಿ ಕಟ್ಟಡ ತಲೆಎತ್ತಿದೆ. ಇಡೀ ಕಟ್ಟಡವನ್ನು ಅಂಧ ಮಕ್ಕಳ ಕಲಿಕೆ ಹಾಗೂ ಓಡಾಟಕ್ಕೆ ಅನುಕೂಲ ಆಗುವಂತೆ ನಿರ್ಮಿಸಲಾಗಿದೆ. ಸರ್ಕಾರಿ ಶಾಲೆಯೊಂದು ಇಷ್ಟೊಂದು ಸುಂದರವಾಗಿ ಹಾಗೂ ಸುಸಜ್ಜಿತವಾಗಿ ಇರಲು ಸಾಧ್ಯವೇ ಎಂದು ಅಚ್ಚರಿಪಡುವಂತಿದೆ.

ADVERTISEMENT

1ರಿಂದ 7ನೇ ತರಗತಿವರೆಗಿನ 100ಕ್ಕೂ ಹೆಚ್ಚು ಮಕ್ಕಳ ಕಲಿಕೆ ಹಾಗೂ ವಾಸ್ತವ್ಯಕ್ಕೆ ಅಗತ್ಯವಾದ 15 ಸುಸಜ್ಜಿತ ಕೊಠಡಿಗಳಿವೆ. ಆಡಳಿತ ನಿರ್ವಹಣೆ, ಬೋಧನೆ, ತರಬೇತಿ, ಸಿಬ್ಬಂದಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದೆ. ಅಂಧ ಮಕ್ಕಳ ಓದಿಗೆ ಬೇಕಾದ ಸಲಕರಣೆಗಳನ್ನು ಅಳವಡಿಸಲಾಗಿದೆ. ಬ್ರೈಲ್ ಲಿಪಿಯ ವಿಸ್ತೃತ ಓದಿಗಾಗಿ ಗೋಡೆಯ ಮೇಲೆ ಉಬ್ಬು ಫಲಕಗಳನ್ನು ಕೆತ್ತಲಾಗಿದೆ.

ಪರಿಸರದ ಜ್ಞಾನ ನೀಡುವ ಕೈತೋಟ ಹಾಗೂ ವಿಹಾರಕ್ಕಾಗಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಕೃಷಿ, ನರ್ಸರಿ ತರಬೇತಿ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡುವ ಸೌಕರ್ಯಗಳು ಇಲ್ಲಿವೆ. ಅಂಗವಿಕಲ ಮಕ್ಕಳು ಶಾಲೆ ಪ್ರವೇಶಿಸಲು ರ್‍ಯಾಂಪ್‌ ಅಳವಡಿಸಲಾಗಿದೆ. ಹೊರಗೆ ಆಟವಾಡಲು ಹೆಚ್ಚಿನ ಸ್ಥಳವಿದೆ. ಇದೇ ಕಟ್ಟಡದಲ್ಲಿಯೇ ಬ್ರೈಲ್ ಪುಸ್ತಕಗಳ ಮುದ್ರಣ ಘಟಕ ಸ್ಥಾಪನೆಗೂ ಯೋಜಿಸಲಾಗಿದೆ.

‘ಈ ಶಾಲೆ ಜಿಲ್ಲೆಯ ಅಂಧ ಮಕ್ಕಳ ಆಶಾಕಿರಣ. 57ಕ್ಕೂ ಹೆಚ್ಚು ಅಂಧರಿಗೆ ಪ್ರವೇಶ ನೀಡಲಾಗಿದೆ. ಅವರಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ. ಹೊಸ ಕಟ್ಟಡ ನಿರ್ಮಾಣದಿಂದ ಉತ್ತಮ ಕಲಿಕಾ ವಾತಾವರಣ ದೊರೆತಿದೆ. ಇನ್ನಷ್ಟು ಮಕ್ಕಳಿಗೆ ಪ್ರವೇಶ ನೀಡಲು ಹಾಗೂ ಅಂಧ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಚಟುವಟಿಕೆಗಳನ್ನು ನಡೆಸಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಪ್ರಭಾರ ಅಧೀಕ್ಷಕ ಅಮರನಾಥ ಕೆ.ಎಂ.

’ಶಾಲೆಯಲ್ಲಿ ಎಲ್ಲವೂ ಇದೆ. ಆದರೆ, ಒಳಚರಂಡಿ ಸಂಪರ್ಕ ಮಾತ್ರ ಇರಲಿಲ್ಲ. ಇದರಿಂದಾಗಿಯೇ ಉದ್ಘಾಟನೆ ವಿಳಂಬ ಆಯಿತು’ ಎನ್ನುತ್ತಾರೆ ಮುಖ್ಯ ಶಿಕ್ಷಕ ಅಣ್ಣಪ್ಪ.

ಶನಿವಾರ ಉದ್ಘಾಟನೆ
ಸೆ. 21ರಂದು ಬೆಳಿಗ್ಗೆ 11.30ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು, ಸಚಿವರು, ಶಾಸಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂಧ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.