ADVERTISEMENT

ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 15:46 IST
Last Updated 10 ಡಿಸೆಂಬರ್ 2025, 15:46 IST
ಬಿಎಂಟಿಸಿ ಬಸ್‌
ಬಿಎಂಟಿಸಿ ಬಸ್‌   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಬಿಎಂಟಿಸಿಯಲ್ಲಿ ಒಟ್ಟು 1,690 ವಿದ್ಯುತ್ ಚಾಲಿತ ಬಸ್‌ಗಳಿದ್ದು, ಅವು ಈವರೆಗೆ 14,000ಕ್ಕೂ ಹೆಚ್ಚು ಬಾರಿ ಕೆಟ್ಟು ನಿಂತಿವೆ. ಆದರೆ, 5,361 ಡೀಸೆಲ್‌ ಎಂಜಿನ್‌ ಬಸ್‌ಗಳು ಕೇವಲ 80 ಬಾರಿ ಕೆಟ್ಟು ನಿಂತಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿಗೆ ತಿಳಿಸಿದರು.

ಪರಿಷತ್ ಸದಸ್ಯ ಎಚ್‌.ಎನ್‌.ಗೋಪಿನಾಥ್‌ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿದ್ಯುತ್ ಚಾಲಿತ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುವ ಮತ್ತು ನಿಗದಿತ ದೂರ ಕ್ರಮಿಸುವ ಮೊದಲೇ ಬ್ಯಾಟರಿಗಳು ಖಾಲಿ ಆಗುತ್ತಿರುವ ಕಾರಣ, ಬಿಎಂಟಿಸಿಯ ಟ್ರಿಪ್‌ ವ್ಯವಸ್ಥೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ಸುಗಮ ಕಾರ್ಯಾಚರಣೆ ಕಷ್ಟವಾಗಿದೆ. ಡೀಸೆಲ್‌ ಬಸ್‌ಗಳಿಂದ ಯಾವುದೇ ತೊಂದರೆ ಇಲ್ಲ’ ಎಂದರು.

‘ಈ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಚಾಲಕರೂ ಗುತ್ತಿಗೆ ಕಂಪನಿಗಳವರೇ ಆಗಿದ್ದಾರೆ. ಈ ಚಾಲಕರ ಅಜಾಗರೂಕ ಮತ್ತು ಅಪಾಯಕಾರಿ ಚಾಲನೆಯಿಂದ ಹಲವು ಅಪಘಾತಗಳು ಸಂಭವಿಸಿವೆ. ಪ್ರಧಾನ ಮಂತ್ರಿ ಇ-ಡ್ರೈವ್‌ ಯೋಜನೆ ಅಡಿ ರಾಜ್ಯಕ್ಕೆ 4,000 ಬಸ್‌ಗಳು ಮಂಜೂರಾಗಿವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇನೆ. ಅವರು ಅಧಿಕಾರಿಗಳನ್ನು ಕರೆಸಿ, ವಿವರಣೆ ಪಡೆದುಕೊಂಡಿದ್ದಾರೆ’ ಎಂದರು.

ADVERTISEMENT

‘ಸೂರ್ಯನಗರ: ತಿಂಗಳಲ್ಲಿ ಇ–ಖಾತೆ’

ಸುವರ್ಣ ವಿಧಾನಸೌಧ (ಬೆಳಗಾವಿ): ಸೂರ್ಯನಗರದ ವಸತಿ ಯೋಜನೆಯ ಎಲ್ಲ ಹಂತದಲ್ಲಿ ನಿರ್ಮಿಸಲಾಗುತ್ತಿರುವ ಸ್ವತ್ತುಗಳಿಗೆ ಒಂದು ತಿಂಗಳಲ್ಲಿ ಇ–ಖಾತೆ ಒದಗಿಸಲಾಗುತ್ತದೆ ಎಂದು ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರು ವಿಧಾನ ಪರಿಷತ್ತಿಗೆ ತಿಳಿಸಿದರು.

ಬುಧವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಸುನೀಲ್‌ ವಲ್ಯಾಪುರ ಪ್ರಶ್ನೆಗೆ ಅವರು ಉತ್ತರಿಸಿದರು.

ಇ–ಖಾತೆ ನೀಡಲು ಅಗತ್ಯವಿರುವ ಎಲ್ಲ ದತ್ತಾಂಶ ಮತ್ತು ವಿವರಗಳನ್ನು ಸಂಬಂಧಿತ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡುವ ಕಾರ್ಯ ಮುಗಿದಿದೆ. ಕೆಲವು ತಾಂತ್ರಿಕ ವ್ಯವಸ್ಥೆಗಳನ್ನು ಸಂಯೋಜಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಈ ಎಲ್ಲ ಕೆಲಸಗಳು ಮುಗಿಯಲಿದ್ದು, ಆ ನಂತರ ಇ–ಖಾತೆ ನೀಡಲಾಗುತ್ತದೆ. ಸೂರ್ಯನಗರ ಯೋಜನೆ ಮಾತ್ರವಲ್ಲದೆ, ಬೇರೆ ಯೋಜನೆಗಳೂ ಸೇರಿ ಒಟ್ಟು 55,000 ಸ್ವತ್ತುಗಳಿಗೆ ಇ–ಖಾತೆ ದೊರೆಯಲಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.