ADVERTISEMENT

ಎಸ್ಸೆಸ್ಸೆಲ್ಸಿ, ಪಿಯು: ಮಾರ್ಚ್‌ಗೆ ಇಲ್ಲ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 19:31 IST
Last Updated 21 ಡಿಸೆಂಬರ್ 2020, 19:31 IST
ಎಸ್. ಸುರೇಶ್‌ಕುಮಾರ್
ಎಸ್. ಸುರೇಶ್‌ಕುಮಾರ್   

ಬೆಂಗಳೂರು: ‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಈ ಬಾರಿ ಮಾರ್ಚ್‌ನಲ್ಲಿ ನಡೆಯುವುದಿಲ್ಲ. ಪ್ರಸಕ್ತ ಶೈಕ್ಷಣಿಕವರ್ಷದ ಕ್ಯಾಲೆಂಡರ್‌ ಅನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದ್ದಾರೆ.

ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಬಾರಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸುವುದಿಲ್ಲ. ಪೋಷಕರು, ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ ಜೊತೆ ಸಮಾಲೋಚನೆ ನಡೆಸಿದ ನಂತರವೇ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಶೈಕ್ಷಣಿಕ ಅವಧಿಯಲ್ಲಿ ಲಭ್ಯವಿರುವ ದಿನಗಳ ಆಧಾರದ ಮೇಲೆ ಪಠ್ಯಕ್ರಮವನ್ನು ಕಡಿತಗೊಳಿಸಲಾಗುವುದು. ಪರೀಕ್ಷಾ ವೇಳಾಪಟ್ಟಿಯ ಜತೆಗೇ ಈ ಮಾಹಿತಿಯನ್ನೂ ಪ್ರಕಟಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅಸಹಾಯಕತೆ:‘ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರ ಸಮಸ್ಯೆ ಬಗ್ಗೆ ಅರಿವಿದೆ. ಕೋವಿಡ್‌ ಬಿಕ್ಕಟ್ಟಿನಿಂದ ಅವರಿಗೆ ತೊಂದರೆಯಾಗಿದೆ. ಅವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲು ಎಲ್ಲ ಪ್ರಯತ್ನ ಮಾಡಲಾಗಿತ್ತು. ಈ ಉದ್ದೇಶಕ್ಕೆ ಕನಿಷ್ಠ ₹300 ಕೋಟಿ ಬೇಕಾಗುತ್ತದೆ. ಆದರೆ, ಇದಕ್ಕೆ ಹಣಕಾಸು ಸಚಿವರು ಒಪ್ಪಿಗೆ ನೀಡಲಿಲ್ಲ. ಕೊರೊನಾ ಬಿಕ್ಕಟ್ಟಿನಿಂದ ಸಮಸ್ಯೆ ಎದುರಿಸುತ್ತಿರುವ ಈ ಶಿಕ್ಷಕರ ಬಗ್ಗೆ ತುಂಬಾ ಬೇಸರವಾಗುತ್ತದೆ’ ಎಂದೂ ಸುರೇಶ್‌ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.