ADVERTISEMENT

ಕೂರ್ಮಗಡ ದೋಣಿ ದುರಂತ: ಮೃತರ ಸಂಖ್ಯೆ 16ಕ್ಕೆ ಏರಿಕೆ

ಬಾಲಕನ ಶವ 90 ಕಿ.ಮೀ ದೂರದ ನೇತ್ರಾಣಿ ಬಳಿ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 13:35 IST
Last Updated 28 ಜನವರಿ 2019, 13:35 IST
ಭಟ್ಕಳದಲ್ಲಿ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ಗುಡ್ಡದ ಸಮೀಪ ಸೋಮವಾರ ಪತ್ತೆಯಾದ ಬಾಲಕನ ಶವವನ್ನು ಅಳ್ವೆಕೋಡಿ ಬಂದರಿ ದೋಣಿ ಮೂಲಕ ತರಲಾಯಿತು
ಭಟ್ಕಳದಲ್ಲಿ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ಗುಡ್ಡದ ಸಮೀಪ ಸೋಮವಾರ ಪತ್ತೆಯಾದ ಬಾಲಕನ ಶವವನ್ನು ಅಳ್ವೆಕೋಡಿ ಬಂದರಿ ದೋಣಿ ಮೂಲಕ ತರಲಾಯಿತು   

ಕಾರವಾರ/ಭಟ್ಕಳ:ಕಾರವಾರದ ಕೂರ್ಮಗಡಸಮೀಪ ಜ.21ರಂದು ನಡೆದದೋಣಿ ದುರಂತದಲ್ಲಿ ಮೃತಪಟ್ಟ ಬಾಲಕನ ಶವ ಭಟ್ಕಳ ತಾಲ್ಲೂಕಿನ ನೇತ್ರಾಣಿದ್ವೀಪದ ಬಳಿ ಸೋಮವಾರ ಪತ್ತೆಯಾಗಿದೆ. ಇದರೊಂದಿಗೆ ಮೃತರ ಸಂಖ್ಯೆ 16ಕ್ಕೇರಿದೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹೊಸೂರಿನ ಬಾಲಕಸಂದೀಪ (10), ದೋಣಿಅವಘಡದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ. ರಕ್ಷಣಾ ತಂಡದ ಸದಸ್ಯರುಸತತ ಎಂಟು ದಿನಗಳಿಂದ ಅವನಿಗೆ ಹುಡುಕಾಟ ನಡೆಸಿದ್ದರು. ಘಟನಾ ಸ್ಥಳದಿಂದ ಸುಮಾರು 90 ಕಿ.ಮೀ ದಕ್ಷಿಣದಲ್ಲಿ ಸಮುದ್ರದ ಮಧ್ಯೆ ತೇಲುತ್ತಿದ್ದ ಅವನ ಶವವನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ನೇತ್ರಾಣಿ ದ್ವೀಪದ ಬಳಿ ಶವ ಕಾಣುತ್ತಿರುವ ಬಗ್ಗೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ಭಾನುವಾರವೇ ಮೀನುಗಾರರು ತಿಳಿಸಿದ್ದರು. ತಕ್ಷಣ ಅಲ್ಲಿಗೆ ತೆರಳಿದ್ದರೂಶವ ಸಿಕ್ಕಿರಲಿಲ್ಲ. ಭಟ್ಕಳದ ಕಡೆ ನೀರಿನ ಸೆಳವು ಇರುವುದರಿಂದ ಶವ ಆ ಕಡೆಗೆ ಹೋಗಿರಬಹುದು ಎಂದು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಸೋಮವಾರ ಹುಡುಕಾಟ ನಡೆಸಿದಾಗ ಶವ ಪತ್ತೆಯಾಯಿತು.

ADVERTISEMENT

ಮೃತದೇಹವು ಊದಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿತ್ತು. ಶವವನ್ನು ಅಳ್ವೆಕೋಡಿಬಂದರಿಗೆತಂದು ಅಲ್ಲಿಂದ ಆಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.

ಮೃತಪಟ್ಟ ಎಲ್ಲರ ಶವಗಳೂ ಸಿಕ್ಕಿರುವ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸರ್ಕಾರಕ್ಕೆಜಿಲ್ಲಾಧಿಕಾರಿ ವರದಿ ಸಲ್ಲಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನಡೆದ ನರಸಿಂಹ ದೇವರ ಜಾತ್ರೆಯಿಂದ ವಾಪಸಾಗುವಾಗ ದೋಣಿ ಅಡಿಮೇಲಾಗಿತ್ತು. ಅದರಲ್ಲಿದ್ದ 35 ಜನರ ಪೈಕಿ ಒಟ್ಟು 16 ಮಂದಿ ಮೃತಪಟ್ಟಿದ್ದರು. ಹೊಸೂರಿನ ಒಂದೇ ಕುಟುಂಬದ 12 ಜನರಲ್ಲಿಒಂಬತ್ತು ಮಂದಿ, ಕಾರವಾರ ಹಾಗೂಮುಂಬೈಯ ಏಳು ಮಂದಿಸೇರಿದ್ದರು.

ಉಪವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ, ತಹಶೀಲ್ದಾರ್ ವಿ.ಎನ್.ಬಾಡಕರ್, ಸಿಪಿಐ ಕೆ.ಎಲ್.ಗಣೇಶ್, ಪಿಎಸ್ಐ ರವಿ, ಗ್ರಾಮ ಲೆಕ್ಕಾಧಿಕಾರಿ ಜ್ಯೋತಿ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.