ADVERTISEMENT

ಬೆಂಗಳೂರು: ಬಾಡಿ ಲೋಶನ್‌ ತರಲಿಲ್ಲಾ ಅಂತಾ ಕೇಸು..!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:06 IST
Last Updated 4 ಫೆಬ್ರುವರಿ 2026, 16:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಆಕೆ ನನಗೆ ಫೋನ್‌ ಮಾಡಿ ಮಗುವಿಗೆ ಕುಡಿಸಲು ಹಾಲಿಲ್ಲ, ಮೈಗೆ ಲೇಪಿಸಲು ಬಾಡಿ ಲೋಶನ್‌ ಇಲ್ಲ. ಮನೆಗೆ ಬರ್ತಾ ತೆಗೆದುಕೊಂಡು ಬನ್ನಿ ಎಂದಳು. ನಾನು ನೀನು ಹೇಳುವುದಕ್ಕೆಲ್ಲಾ ಕವಡೆ ಕಾಸನ್ನೂ ಖರ್ಚು ಮಾಡುವುದಿಲ್ಲ ಎಂದು ನಿರಾಕರಿಸಿದೆ. ಅಷ್ಟಕ್ಕೇ ಆಕೆ ನನ್ನ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪದ ಕೇಸು ದಾಖಲಿಸಿದ್ದಾಳೆ...’

‘ನನ್ನ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 32ನೇ ಎಸಿಜೆಎಂ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ 33 ವರ್ಷದ ಪುರುಷ ದಾಖಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹೈಕೋರ್ಟ್‌ ವಕೀಲೆ ಕೆ.ರಾಮುಲಾ ಅವರು, ‘ಅರ್ಜಿದಾರರು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಅಂಶ ತಿಳಿದ ಕೂಡಲೇ ಪತ್ನಿ (32) ಬೇಕೆಂದೇ ಈ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆಕೆ ಆರೋಪಿಸಿರುವ ಅಂಶಗಳೆಲ್ಲಾ ಅಸ್ಪಷ್ಟ, ಬಹು ಉದ್ದೇಶಿತ, ಸ್ವಯಂ ವಿರೋಧಭಾಸಗಳಿಂದ ಕೂಡಿದ ಮತ್ತು ವಿಹೀನ ಭಾವಗಳನ್ನು ಒಳಗೊಂಡಿವೆ’ ಎಂದರು.

‘ಪ್ರಕರಣದ ಸಾಕ್ಷಿಗಳೂ ಸುಳ್ಳು ಹೇಳಿಕೆ ದಾಖಲಿಸಿದ್ದು ಅರ್ಜಿದಾರರ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 498(ಎ) ಮತ್ತು 323ರ ಅಡಿಯಲ್ಲಿ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.