ADVERTISEMENT

ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:38 IST
Last Updated 20 ಆಗಸ್ಟ್ 2025, 16:38 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಾಗೂ ದಲಿತ ಮುಖ್ಯಮಂತ್ರಿ ಕೂಗು ತಪ್ಪಿಸಲು ಸುಪ್ರೀಂ ಕೋರ್ಟ್ ಆದೇಶ ತಿರಸ್ಕಾರ ಮಾಡಿ ಅವಕಾಶ ವಂಚಿತ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆ ಆಧಾರದಲ್ಲಿ ಕಾಲಕಾಲಕ್ಕೆ ಮೀಸಲಾತಿ ಪರಿಷ್ಕರಿಸುವಂತೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ರಾಜ್ಯದಲ್ಲಿ ಕೇವಲ ಆರು ಜಾತಿಯಿಂದ ಪ್ರಾರಂಭವಾದಂತಹ ಪರಿಶಿಷ್ಟ ಜಾತಿ ಪಟ್ಟಿಗೆ ಈಗ 101 ಜಾತಿಗಳು ಸೇರಿವೆ. ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ಸೇರಿಸಿಕೊಂಡು ಹೋಯಿತು. ಆದರೆ, ಅದಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವ ಪ್ರಯತ್ನ ಮಾಡಲಿಲ್ಲ. ಇದು ಸಮುದಾಯಕ್ಕೆ ಮಾಡಿರುವ ದೊಡ್ಡ ದ್ರೋಹ’ ಎಂದರು. 

ರಾಜ್ಯ ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡ, ಅಲೆಮಾರಿ ಸಮುದಾಯಗಳಿಗೆ ಒಂದು ಪರ್ಸೆಂಟೂ ಮೀಸಲಾತಿ ಸಿಗುವುದಿಲ್ಲ. ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯದವರು ಮೈಸೂರು ಭಾಗದಲ್ಲಿಯೇ ಹೆಚ್ಚಾಗಿದ್ದಾರೆ. ಅವರಿಗೆ ಸಿದ್ದರಾಮಯ್ಯ ಭಾರಿ ಅನ್ಯಾಯ ಮಾಡಿದ್ದಾರೆ ಎಂದರು. 

ADVERTISEMENT

‘ನಾನು ಮಾಡಿರುವ ಒಳ ಮೀಸಲಾತಿ ಆದೇಶ ಈಗಾಗಲೇ ಜಾರಿಯಲ್ಲಿದೆ. ಅದರ ಆಧಾರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಸೀಟುಗಳು ಸಿಕ್ಕಿವೆ. ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದು ಒಳಮೀಸಲಾತಿ ಜಾರಿ ಮಾಡಿದ್ದೆವು. ಸಂವಿಧಾನ ತಿದ್ದುಪಡಿಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಅದರ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದೆವು. ನಮ್ಮ ಆದೇಶವನ್ನೇ ಜಾರಿ ಮಾಡಿ ಸಮುದಾಯಗಳಿಗೆ ನ್ಯಾಯ ಒದಗಿಸಿ’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.