ADVERTISEMENT

ಸಣ್ಣ ವ್ಯಾಪಾರಿಗಳಿಗೆ GST ನೋಟಿಸ್ | ಸಿ.ಎಂ ಪರಿಹಾರ ಸೂಚಿಸಲಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 16:00 IST
Last Updated 19 ಜುಲೈ 2025, 16:00 IST
<div class="paragraphs"><p>ಬಸವರಾಜ ಬೊಮ್ಮಾಯಿ</p></div>

ಬಸವರಾಜ ಬೊಮ್ಮಾಯಿ

   

ಬೆಂಗಳೂರು: ‘ಜಿಎಸ್‌ಟಿ ಪಾವತಿಸಿ ಎಂದು ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ವ್ಯಾಪಾರಿಗಳು ಗಾಬರಿಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಪರಿಹಾರ ಒದಗಿಸಬೇಕು’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ಅಧಿಕಾರಿಗಳು ದುಡುಕಿನ ಕ್ರಮ ತೆಗೆದುಕೊಂಡಿದ್ದಾರೆ. ಹಲವಾರು ವರ್ಷದ ತೆರಿಗೆ ಬಾಕಿ, ಬಡ್ಡಿ ಮತ್ತು ದಂಡವನ್ನು ಸೇರಿಸಿ ದೊಡ್ಡ ಮೊತ್ತದ ಬಾಕಿ ಪಾವತಿ ಮಾಡಿ ಎಂದು ಸೂಚಿಸಿದ್ದಾರೆ. ಸಣ್ಣ ವ್ಯಾಪಾರಿಗಳು ಅಷ್ಟು ಹಣ ಎಲ್ಲಿಂದ ತರುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ವ್ಯಾ‍ಪಾರಿಗಳು ಹೆದರಿದ್ದಾರೆ. ಅವರ ಪ್ರತಿನಿಧಿಗಳನ್ನು ಕರೆದು ಚರ್ಚೆ ಮಾಡಿ. ಇತರ ತೆರಿಗೆದಾರರಿಗೆ ಕರ ಸಮಾಧಾನ ಯೋಜನೆ ಅಡಿಯಲ್ಲಿ ರಿಯಾಯಿತಿ ನೀಡಲಾಗುತ್ತದೆಯೋ, ಇವರಿಗೂ ನೀಡಿ. ಬೇರೆ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ, ನೀವೂ ಕ್ರಮ ತೆಗೆದುಕೊಳ್ಳಿ’ ಎಂದಿದ್ದಾರೆ.

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿಯೇ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿದೆ
ಬಸವರಾಜ ಬೊಮ್ಮಾಯಿ ಬಿಜೆಪಿ ಸಂಸದ

ವ್ಯಾಪಾರಿಗಳ ನೆರವಿಗೆ ಬಿಜೆಪಿ ಸಹಾಯವಾಣಿ

‘ನೋಟಿಸ್‌ ಪಡೆದಿರುವ ವ್ಯಾಪಾರಿಗಳ ಅನುಕೂಲಕ್ಕಾಗಿ ಬಿಜೆಪಿಯಿಂದ ಸಹಾಯವಾಣಿ (88842 45123) ಆರಂಭಿಸಲಾಗುತ್ತದೆ. ಸೋಮವಾರದಿಂದ ಇದು ಕಾರ್ಯಾರಂಭ ಮಾಡಲಿದೆ. ವ್ಯಾಪಾರಿಗಳಿಗೆ ಅಗತ್ಯವಿರುವ ಮಾಹಿತಿ ನೀಡುತ್ತೇವೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಈ ನಡೆಯಿಂದ ಸಣ್ಣ ವ್ಯಾಪಾರಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ. ಅದನ್ನು ಪರಿಹರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ದೂರಿದರು. ‘ಜಿಎಸ್‌ಟಿ ನೋಂದಣಿ ಜಿಎಸ್‌ಟಿ ಪಾವತಿ ಬಗ್ಗೆ ಸಣ್ಣ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಯೇ ಇಲ್ಲ. ಆದರೆ ಈಗ ಏಕಾಏಕಿ ತೆರಿಗೆ ಪಾವತಿಸಿ ಎಂದು ನೋಟಿಸ್‌ ನೀಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.