ADVERTISEMENT

ಅಂಗಾಂಗ ಕಸಿ ಯೋಜನೆ ವ್ಯಾಪ್ತಿಗೆ ಅಸ್ಥಿ ಮಜ್ಜೆ ಕಸಿ?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:32 IST
Last Updated 8 ಅಕ್ಟೋಬರ್ 2019, 19:32 IST
   

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ರಾಜ್ಯ ಅಂಗಾಂಗ ಕಸಿ ಯೋಜನೆ’ಯಡಿ ಅಸ್ಥಿ ಮಜ್ಜೆ ಕಸಿಯನ್ನೂ (ಬೋನ್ ಮ್ಯಾರೊ) ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಒಲವು ತೋರಿದೆ.

‘ಇತ್ತೀಚೆಗೆ ಅಸ್ಥಿ ಮಜ್ಜೆ ಸಮಸ್ಯೆ ಹೆಚ್ಚಾಗಿದ್ದು, ಕಸಿ ಮಾಡಿಸಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ. ಹಾಗಾಗಿ, ರಾಜ್ಯ ಅಂಗಾಂಗ ಕಸಿ ಯೋಜನೆಗೆ ಅಸ್ಥಿ ಮಜ್ಜೆ ಕಸಿಯನ್ನೂ (ಬೋನ್ ಮ್ಯಾರೊ) ಸೇರ್ಪಡೆಗೊಳಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಗಿದೆ.

ಆರೋಗ್ಯ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ಪ್ರತಿ ರೋಗಿಗೆ ಕಸಿ ಮಾಡಿಸಿಕೊಳ್ಳಲು ₹11 ಲಕ್ಷ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ’ ಎಂದುಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.

ADVERTISEMENT

‘ಬಿಪಿಎಲ್ ಕಾರ್ಡ್ ಹೊಂದಿರುವವರು ಹೃದಯ ಕಸಿ, ಮೂತ್ರಪಿಂಡ ಕಸಿ, ಯಕೃತ್ ಕಸಿ ಮಾಡಲು ರಾಜ್ಯ ಅಂಗಾಂಗ ಕಸಿ ಯೋಜನೆಯ ಮೂಲಕ ಧನಸಹಾಯ ಪಡೆಯಬಹುದು. ಅದೇ ರೀತಿ, ಅಸ್ಥಿ ಮಜ್ಜೆ ಕಸಿಗೂ ಧನಸಹಾಯ ನೀಡುವ ವಿಶ್ವಾಸವಿದೆ. ಅಸ್ಥಿ ಮಜ್ಜೆ ಕಸಿ ವೇಳೆ ಸ್ವಲ್ಪ ಸೋಂಕು ಉಂಟಾದರೂ ರೋಗಿಯ ಜೀವ ಹಾನಿಯಾಗುವ ಸಂಭವ ಇರುತ್ತದೆ. ಅನೇಕರು ಈ ಕಸಿ ಮಾಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲ’ ಎಂದರು.

ರಾಜ್ಯ ಸರ್ಕಾರ 2018ರಲ್ಲಿ ಬಡವರಿಗಾಗಿ ‘ರಾಜ್ಯ ಅಂಗಾಂಗ ಕಸಿ ಯೋಜನೆ’ ಆರಂಭಿಸಿ, ₹ 30 ಕೋಟಿ ಅನುದಾನ ಮೀಸಲಿಟ್ಟಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಈ ಯೋಜನೆಯ ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಹೃದಯ ಕಸಿಗೆ ಪ್ರತಿ ರೋಗಿಗೆ ₹ 11 ಲಕ್ಷ, ಮೂತ್ರಪಿಂಡ ಕಸಿಗೆ ₹ 3 ಲಕ್ಷ, ಯಕೃತ್ ಕಸಿಗೆ
₹ 12 ಲಕ್ಷ ಧನಸಹಾಯ ನೀಡಲು ಅವಕಾಶವಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.