ADVERTISEMENT

ಗಡಿ ವಿಷಯ ಕೆದಕುತ್ತಿರುವ ಮಹಾರಾಷ್ಟ್ರದ ಕ್ರಮ ಸರಿಯಲ್ಲ:ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:42 IST
Last Updated 23 ಜನವರಿ 2020, 15:42 IST

ಬೆಳಗಾವಿ: ‘ಬೆಳಗಾವಿ ಗಡಿ ವಿಚಾರ ಕುರಿತು ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೇಂದ್ರ ಸರ್ಕಾರ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ ಮೇಲೆಯೂ ಅಲ್ಲಿನ ಸರ್ಕಾರ ಇದೇ ವಿಷಯವಾಗಿ ಕೆದಕುತ್ತಿರುವುದು ಸರಿಯಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಗಳ ರಚನೆ ಸಂದರ್ಭದಲ್ಲಿಯೇ ಗಡಿ ವಿಷಯವು ಇತ್ಯರ್ಥವಾಗಿದೆ. ಇಂದು ಮಹಾರಾಷ್ಟ್ರ ಸರ್ಕಾರ ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಅಂದಿನ ಸಮಿತಿಯು ಅಧ್ಯಯನ ಮಾಡಿದ ನಂತರವೇ ಗಡಿ ಗುರುತಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೇಂದ್ರ ಸರ್ಕಾರವು ತನ್ನ ಹೇಳಿಕೆಯನ್ನು ಅಫಿಡವಿಟ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ’ ಎಂದು ವಿವರಿಸಿದರು.

‘ಬೆಳಗಾವಿಯಲ್ಲಿ ಎರಡೂ ಭಾಷಿಕರ ಮಧ್ಯೆ ಸಾಮರಸ್ಯ ಇದೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಬಂಧಗಳು ಇವೆ. ಇವುಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಮಹಾರಾಷ್ಟ್ರದಲ್ಲಿ ಪ್ರತಿ ಸಲ ಸರ್ಕಾರ ಬದಲಾದಾಗ ಬೆಳಗಾವಿ ವಿಷಯವನ್ನು ಕದಡುವ ಕೆಲಸ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಗಡಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ರಾಜ್ಯದ ವಕೀಲರ ತಂಡಕ್ಕೆ ಎಲ್ಲ ಮಾಹಿತಿಯನ್ನು ಪೂರೈಸಲಾಗುವುದು. ಸದ್ಯದಲ್ಲಿಯೇ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರು ಬೆಳಗಾವಿ ಭೇಟಿ ನೀಡಿ, ಸ್ಥಳೀಯರ ಅಭಿಪ್ರಾಯವನ್ನೂ ಸಂಗ್ರಹಿಸುವ ಕಾರ್ಯ ಮಾಡಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.