ಬೆಂಗಳೂರು: ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ನಿಗಮದ ಹಿಂದಿನ ನಿರ್ದೇಶಕಿ ಆರ್.ಲೀಲಾವತಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ.
2018–2023ರ ಅವಧಿಯಲ್ಲಿ ಫಲಾನುಭವಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿಗಮದ ಹಣವನ್ನು ಅವಕ್ಕೆ ವರ್ಗಾವಣೆ ಮಾಡಿಕೊಂಡ ಪ್ರಕರಣದಲ್ಲಿ ಹಿಂದಿನ ಮತ್ತೊಬ್ಬ ನಿರ್ದೇಶಕ ಬಿ.ಕೆ.ನಾಗರಾಜಪ್ಪ ಅವರನ್ನು ಇ.ಡಿ ಈಗಾಗಲೇ ಬಂಧಿಸಿದೆ.
ಶನಿವಾರ ರಾತ್ರಿ ಲೀಲಾವತಿ ಅವರನ್ನು ವಶಕ್ಕೆ ಪಡೆದಿದ್ದ ಇ.ಡಿ, ಭಾನುವಾರ ಶಾಂತಿನಗರದಲ್ಲಿನ ಕಚೇರಿಗೆ ಕರೆದೊಯ್ದಿತ್ತು. ವಿಚಾರಣೆ ನಂತರ ಸೋಮವಾರ ಬಂಧಿಸಿತ್ತು. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಅವರನ್ನು ಸೋಮವಾರ ಹಾಜರುಪಡಿಸಿ, ಏಳು ದಿನಗಳ ಕಸ್ಟಡಿಗೆ ಪಡೆದಿದೆ.
‘ಈ ಇಬ್ಬರೂ ನಿರ್ದೇಶಕರಾಗಿದ್ದ ಅವಧಿಯಲ್ಲಿ ಒಟ್ಟು ₹97 ಕೋಟಿಯನ್ನು ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ನಾಗರಾಜಪ್ಪ ತಮ್ಮ ಪಾಲುದಾರಿಕೆ ಇರುವ ಕಂಪನಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರೆ, ಲೀಲಾವತಿ ಅವರು ತಮ್ಮ ಸೋದರಿ ಮಂಜುಳಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿಸಿದ್ದರು. ಆ ನಂತರ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು’ ಎಂದು ಇ.ಡಿ ತಿಳಿಸಿದೆ.
ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರಲ್ಲಿ ಲೀಲಾವತಿ ಅವರು ನೇರವಾಗಿ ಭಾಗಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿದೆ ಎಂದು ಇ.ಡಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.