ADVERTISEMENT

ಮತ ಹಾಕುವ ಮುನ್ನ ಗ್ಯಾಸ್‌ ಸಿಲಿಂಡರ್‌, ಟ್ರಾಕ್ಟರ್‌ಗೆ ನಮಸ್ಕರಿಸಿ: ಡಿಕೆಶಿ

ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 13:08 IST
Last Updated 26 ಅಕ್ಟೋಬರ್ 2021, 13:08 IST
ಸಿಂದಗಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾದಿಗ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ ಅವರಿಗೆ ಬೃಹತ್‌ ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು
ಸಿಂದಗಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾದಿಗ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ ಅವರಿಗೆ ಬೃಹತ್‌ ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು   

ವಿಜಯಪುರ: ಸಿಂದಗಿ, ಹಾನಗಲ್‌ ಮತದಾರರು ಮತ ಹಾಕುವ ಮುನ್ನ ಗ್ಯಾಸ್‌ ಸಿಲಿಂಡರ್‌, ಬೈಕ್, ಕಾರು, ಆಟೋ, ಟ್ರಾಕ್ಟರ್‌ಗೆ ನಮಸ್ಕರಿಸಿ ಮತ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಸಿಂದಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಅಡುಗೆ ಗ್ಯಾಸ್‌ ಸಿಲಿಂಡರ್‌ಗೆ ನಮಸ್ಕರಿಸಿ ಹೋಗಿ ಮತದಾನ ಮಾಡಿ ಎಂದಿದ್ದರು. ಈಗ ನಾನು ಅದನ್ನು ಮತದಾರರಿಗೆ ನೆನಪಿಸಲು ಬಯಸುತ್ತೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ರಸಗೊಬ್ಬರ ಅಭಾವವಿದ್ದು, ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಸರ್ಕಾರ ರೈತರ ಪರಿಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಳಿಕ ನಡೆದ ಮಾದಿಗ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇವಲ ಉಪ ಚುನಾವಣೆಯಲ್ಲ. ಇದು ಸುಳ್ಳು ಹಾಗೂ ಸತ್ಯದ ನಡುವಿನ ಯುದ್ಧ. ಬಿಜೆಪಿಯವರು ಸುಳ್ಳಿನ ಮೇಲೆ ಮನೆ ಕಟ್ಟಲು ಹೊರಟಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.

ನಾವು ವಿವಿಧ ಸಮಾಜದ ಮುಖಂಡರ ಸಭೆ ಮಾಡಿ ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬುತ್ತಿದ್ದೇವೆಯೇ ಹೊರತು, ವಿಭಜನೆ ಮಾಡುತ್ತಿಲ್ಲ. ನಾವು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳಿಗೆ ಜನಗಣತಿ ಆಧಾರದ ಮೇಲೆ ಅನುದಾನ ನೀಡಬೇಕು ಎಂಬ ಕಾನೂನು ದೇಶದಲ್ಲಿ ತಂದಿದ್ದರೆ ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಎಂದರು.

ಬಿಜೆಪಿ ಶಕ್ತಿ ನೋಟಿನಲ್ಲಿ:ಬಿಜೆಪಿ ಶಕ್ತಿ ಕೇವಲ ನೋಟಿನಲ್ಲಿದೆ. ನಿಮ್ಮನ್ನು ಖರೀದಿಸಲು ಮುಂದಾಗುತ್ತಾರೆ. ಅವರು ಉತ್ತಮ ಆಡಳಿತ ನೀಡಿಲ್ಲ. ಬಡವರು, ರೈತರಿಗೆ ನೆರವು ನೀಡಿಲ್ಲ. ಸಿಂದಗಿ ಕ್ಷೇತ್ರದ ಜನತೆ ಪ್ರಜ್ಞಾವಂತ, ಬುದ್ಧಿವಂತರಿದ್ದೀರಿ. ನೀವು ನಿಮ್ಮ ಸ್ವಾಭಿಮಾನದ ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಶಿವಕುಮಾರ್ ಸಭೆ ಮೊಟಕು:ಡಿ.ಕೆ.ಶಿವಕುಮಾರ್‌ ಅವರ ಮಾವ ಮೈಸೂರಿನ ಶ್ರೀ ರಾಜ ಸೋಪ್ ನೆಟ್ ಕಾರ್ಖಾನೆ ಮಾಲೀಕರಾದ ಆರ್. ತಿಮ್ಮಯ್ಯ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಸಿಂದಗಿ ಹಾಗೂ ಹಾನಗಲ್‌ನಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಬೇಕಾಗಿದ್ದ ಚುನಾವಣಾ ಸಭೆಗಳನ್ನು ಮೊಟಕುಗೊಳಿಸಿ ಮೈಸೂರಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.