ADVERTISEMENT

ನಂಜನಗೂಡು: ಬಹಿಷ್ಕಾರ ಪ್ರಕರಣಕ್ಕೆ‌ ಸೌಹಾರ್ದ ಅಂತ್ಯ

ಕೊಂತಯ್ಯನಹುಂಡಿ ಗ್ರಾಮದಲ್ಲಿ ತಹಶೀಲ್ದಾರ್ ಸಭೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:31 IST
Last Updated 23 ಮಾರ್ಚ್ 2022, 19:31 IST
ನಂಜನಗೂಡು ತಾಲ್ಲೂಕಿನ ಕೊಂತಯ್ಯನಹುಂಡಿ ಗ್ರಾಮದಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದ ಹಿನ್ನಲೆಯಲ್ಲಿ ಬುಧವಾರ ತಹಶೀಲ್ದಾರ್ ಶಿವಮೂರ್ತಿ ಸಭೆ ನಡೆಸಿದರು.
ನಂಜನಗೂಡು ತಾಲ್ಲೂಕಿನ ಕೊಂತಯ್ಯನಹುಂಡಿ ಗ್ರಾಮದಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದ ಹಿನ್ನಲೆಯಲ್ಲಿ ಬುಧವಾರ ತಹಶೀಲ್ದಾರ್ ಶಿವಮೂರ್ತಿ ಸಭೆ ನಡೆಸಿದರು.   

ನಂಜನಗೂಡು: ತಾಲ್ಲೂಕಿನ ಕೊಂತಯ್ಯನಹುಂಡಿ ಗ್ರಾಮದಲ್ಲಿ ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ದೂರಿನ ಮೇರೆಗೆ ಬುಧವಾರ ಭೇಟಿ ನೀಡಿದ್ದ ತಹಶೀಲ್ದಾರ್ ಶಿವಮೂರ್ತಿ, ಗ್ರಾಮಸ್ಥರೊಂದಿಗೆ ಚರ್ಚಿಸಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದರು. ದೂರುದಾರ ಗುರುಮಲ್ಲಪ್ಪ ಕುಟುಂಬದವರು ಮೊಕದ್ದಮೆ ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿದರು.

ಮೊದಲು ಗುರುಮಲ್ಲಪ್ಪ ಮನೆಗೆ ಭೇಟಿ ನೀಡಿದ ತಹಶೀಲ್ದಾರ್, ಮೂರು ಕುಟುಂಬಗಳ ಸದಸ್ಯರಿಂದ ಮಾಹಿತಿ ಪಡೆದರು. ನಂತರ ಗ್ರಾಮದ ಅರಳಿ ಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

ಗ್ರಾಮದ ಮುಖಂಡ ಗೌಡಿಕೆ ಪುಟ್ಟಸ್ವಾಮಿ ಮಾತನಾಡಿ, ‘ರಸ್ತೆ ನಿರ್ಮಾಣ ವಿಚಾರದಲ್ಲಿ ನಡೆದ ಗಲಾಟೆಯಿಂದ ಮನಸ್ತಾಪ ಉಂಟಾಗಿತ್ತು. ಮಾರ್ಚ್ 25ರಂದು ಗ್ರಾಮದಲ್ಲಿ ನಡೆಯುವ ಮಂಟೆ ಸ್ವಾಮಿ ಆರಾಧನೆಗೆ ದೇವಾಲಯದ ಹಣವನ್ನಷ್ಟೇ ಬಳಸಲಾಗುವುದು. ಗುರುಮಲ್ಲಪ್ಪ ಕುಟುಂಬದವರು ಹಬ್ಬ ಆಚರಣೆಗೆ ದವಸ, ಧಾನ್ಯ ನೀಡಬಹುದು. ಮನಸ್ತಾಪವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

ನಂತರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ತಹಶೀಲ್ದಾರ್, ‘ಶುಕ್ರವಾರದ ದೇವರ ಹಬ್ಬವನ್ನು ಪರಸ್ಪರ ಕೂಡಿ ನಡೆಸುವಂತೆ ಸೂಚಿಸಲಾಗಿದೆ. 28ರಂದು ನಗರದಲ್ಲಿ ಗ್ರಾಮದ ಮುಖಂಡರು ಹಾಗೂ ಗುರುಮಲ್ಲಪ್ಪ ಕುಟುಂಬದವರೊಡನೆ ಸಭೆ ನಡೆಸಲಾಗುವುದು. ಗಲಾಟೆ, ಬಹಿಷ್ಕಾರ ಪ್ರಕರಣಕ್ಕೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು’ ಎಂದರು. ಮುಖಂಡ ಮರಿಸ್ವಾಮಿ, ಪುಟ್ಟಬುದ್ದಿ, ಉಪ ತಹಶೀಲ್ದಾರ್ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.