ಬೆಂಗಳೂರು: ‘ನಾನು ಶಾಸಕನಾಗಿ, ಮನೆಗಳ ಹಂಚಿಕೆಗೆ ನಾಲ್ಕು ಬಾರಿ ಪತ್ರ ಕೊಟ್ಟಿದ್ದೇನೆ. ಆದರೆ ಕೆಲಸ ಆಗಿಲ್ಲ. ಅದೇ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ತೆಗೆದುಕೊಂಡು ಕೊಟ್ಟರೆ ಕೆಲಸ ಆಗುತ್ತದೆ ಅಂದರೆ ಏನರ್ಥ? ನನ್ನ ಮನವಿ ಪತ್ರಗಳನ್ನೂ ತೆಗೆದುಕೊಳ್ಳಬೇಕಲ್ಲವೇ’ ಎಂದು ಆಳಂದ ಶಾಸಕರೂ ಆಗಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ. ಆರ್. ಪಾಟೀಲ ಪ್ರಶ್ನಿಸಿದರು.
‘ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದರಷ್ಟೇ ಮನೆ ಮಂಜೂರು ಮಾಡಲಾಗುತ್ತದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಆರ್. ಪಾಟೀಲ ಹೇಳಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿತ್ತು.
ಈ ಬಗ್ಗೆ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನನಗೆ ಮೊಬೈಲ್ ಬಳಸುವುದೂ ಗೊತ್ತಿಲ್ಲ. ಆಡಿಯೊ ನಾನು ಬಿಡುಗಡೆ ಮಾಡಿಲ್ಲ. ಆ ಧ್ವನಿ ನನ್ನದೆ. ನಾನು ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ?’ ಎಂದೂ ಅವರು ಪ್ರತಿಕ್ರಿಯಿಸಿದರು.
‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ನನಗೆ ಅನುಮಾನವಿದೆ. 5-6 ಪಂಚಾಯಿತಿಗಳಲ್ಲಿ ಹಣ ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾವು (ಕಾಂಗ್ರೆಸ್ ಪಕ್ಷ) ಜನಪರ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದು. ಆದರೆ, ಹೀಗಾಗಬಾರದಿತ್ತು’ ಎಂದರು.
‘ಇದು ಪ್ರಜಾಪ್ರಭುತ್ವ. ಯಾರ‍್ಯಾರಿಗೆ ಯಾವ ಅಸ್ತ್ರ ಬೇಕೊ ಅದನ್ನು ಬಳಸಿಕೊಳ್ಳುತ್ತಾರೆ. ಅದಕ್ಕೆ ನಾನು ಏನು ಮಾಡಲಿ. ಖಂಡಿತವಾಗಿಯೂ ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ. ಪಕ್ಷ, ಸರ್ಕಾರಕ್ಕೆ ಮುಜುಗರ ಆಗಬಾರದು ಎಂದಾಗಿದ್ದರೆ ಸಚಿವರಿಗೆ ಕೊಟ್ಟ ಪತ್ರಕ್ಕೆ ಕೆಲಸ ಆಗಬೇಕಿತ್ತು. ಈ ಬಗ್ಗೆ ಸಚಿವರ ಜೊತೆ ಹಲವು ಬಾರಿ ಚರ್ಚಿಸಿದ್ದೇನೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಭ್ರಷ್ಟಾಚಾರ ನಡೆದಿಲ್ಲ ಎಂದಾದರೆ ತನಿಖೆ ನಡೆಸಲಿ’ ಎಂದರು.
‘ನನಗೆ ಈ ವಿಚಾರದಿಂದ ತುಂಬಾ ಬೇಸರವಾಗಿದೆ. ಬಡವರ ಹೊಟ್ಟೆ ಮೇಲೆ ಕಲ್ಲು ಹೊಡೆಯಬಾರದು. ನಾವು ಶಾಸಕರಾದವರು ಎಲ್ಲಿ, ಏನು ಬೇಕೆಂದು ಹೇಳುತ್ತೇವೆ. ನನಗೆ ಜನರ ಬಗ್ಗೆ ಬದ್ಧತೆ ಇದೆ. ನಾನು ಏನು ಮಾತನಾಡಬೇಕೊ ಅದೆಲ್ಲವನ್ನೂ ಮಾತನಾಡಿದ್ದೇನೆ’ ಎಂದೂ ಹೇಳಿದರು.
‘ಮುಖ್ಯಮಂತ್ರಿ ಕರೆದರೆ ಮಾತ್ರ ಅವರ ಬಳಿ ಈ ಬಗ್ಗೆ ವಿವರಣೆ ಕೊಡುತ್ತೇನೆ. ಆದರೆ, ನಾನಾಗಿ ಅವರ ಬಳಿ ಹೋಗುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.
ವಿರೋಧ ಪಕ್ಷ ಬಿಜೆಪಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಕಾಲದಲ್ಲೂ ಇಂತಹದ್ದೆಲ್ಲ ನಡೆದಿದೆ’ ಎಂದರು.
ಶಾಸಕರ ಹೇಳಿಕೆ ಸರಿ ಅಲ್ಲ: ಡಿ.ಕೆ. ಶಿವಕುಮಾರ್
‘ಪಾರದರ್ಶಕವಾಗಿ ವಸತಿ ಹಂಚಿಕೆ ಆಗುವಾಗ ಫಲಾನುಭವಿ ಹಣ ನೀಡಲು ಹೇಗೆ ಸಾಧ್ಯ? ಶಾಸಕರು ಯಾವ ಉದ್ದೇಶದಲ್ಲಿ ಹೇಳಿದ್ದಾರೊ. ಇದು ಸರಿ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ನಾನು ಮಾಡಿರುವ ಆರೋಪ ನಿಜ’ ಎಂದು ಶಾಸಕ ಬಿ.ಆರ್. ಪಾಟೀಲ ಅವರು ಪುನರುಚ್ಚರಿಸಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್ ‘ಅವರು ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಈ ವಿಚಾರ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ. ಅವರು ಈ ವಿಚಾರವಾಗಿ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
‘ವಸತಿ ಹಂಚುವ ನಿರ್ಧಾರ ತೆಗೆದುಕೊಳ್ಳುವವರು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳು. ಶಾಸಕರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಸರ್ಕಾರದಲ್ಲಿ ಇಂತಹ ವಿಚಾರ ಇಲ್ಲ. ಈ ಬಗ್ಗೆ ಶಾಸಕರ ಜೊತೆ ನಾನು ಮತ್ತು ಮುಖ್ಯಮಂತ್ರಿ ಮಾತನಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.