ADVERTISEMENT

ಕುಮಾರಸ್ವಾಮಿ ಹೇಳಿಕೆಗೆ ಬ್ರಾಹ್ಮಣ ಸಂಘಟನೆಗಳ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 19:09 IST
Last Updated 7 ಫೆಬ್ರುವರಿ 2023, 19:09 IST
   

ಬೆಂಗಳೂರು: ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬ್ರಾಹ್ಮಣರ ಬಗ್ಗೆ ಉಲ್ಲೇಖಿಸಿ, ಗಾಂಧೀಜಿಯನ್ನು ಕೊಂದವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿರುವುದನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಖಂಡಿಸಿದೆ.

‘ದೇಶಸ್ಥ, ಚಿತ್ಪಾವನ, ಕರ್ನಾಟಕ ಹಾಗೂ ಪೇಶ್ವೆ ಎಂದು ಹೇಳಿ ಬ್ರಾಹ್ಮಣ ಸಮುದಾಯವನ್ನು ಒಡೆಯಲು ಸಂಚು ನಡೆಸಿದ್ದಾರೆ. ನಮ್ಮ ಸಮುದಾಯದಲ್ಲಿ ಶುದ್ಧ ಮತ್ತು ಶ್ರೇಷ್ಠ ರಾಜಕೀಯ ಮುಖಂಡರಿದ್ದು, ಅವರೆಲ್ಲರಿಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದೆ. ಅದಕ್ಕೆ ಕುಮಾರಸ್ವಾಮಿ ಅವರ ಶಿಫಾರಸು ಬೇಕಾಗಿಲ್ಲ. ಅವರು ತಮ್ಮ ಕೆಟ್ಟ ರಾಜಕೀಯ ತೆವಲಿಗೆ ಸಮುದಾಯವನ್ನು ಒಡೆಯುವ ಹಾಗೂ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತನಾಡಿರುವುದಕ್ಕೆ ಕೂಡಲೇ ಕ್ಷಮೆ ಕೇಳಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್. ಪ್ರದೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇಶ್ವೆ ಬ್ರಾಹ್ಮಣರ ನಿಂದನೆ ಖಂಡನೀಯ:

ADVERTISEMENT

ಪೇಶ್ವೆ ಬ್ರಾಹ್ಮಣರ ಇತಿಹಾಸ ತಿಳಿಯದೇ ಎಚ್‌.ಡಿ.ಕುಮಾರಸ್ವಾಮಿ ಅವರು ಟೀಕೆ ಮಾಡಿರುವುದು ಖಂಡನೀಯ ಎಂದು ವಿಶ್ವ ವಿಪ್ರ ಮೈತ್ರೇಯಿ ಪರಿಷತ್‌ ಅಧ್ಯಕ್ಷ ರಘುನಾಥ್‌ ಎಸ್‌ ತಿಳಿಸಿದ್ದಾರೆ.

ಪೇಶ್ವೆ ಬ್ರಾಹ್ಮಣರಾದ ವಾಸುದೇವ ಬಲವಂತ ಫಡಕೆ, ಬಾಲಗಂಗಾಧರ ತಿಲಕ, ವೀರ ಸಾವರ್ಕರ್‌, ಚಾಪೇಕರ್‌ ಸಹೋದರರು, ಸೇನಾಪತಿ ಬಾಪಟ್‌, ಗೋಪಾಲಕೃಷ್ಣ ಗೋಖಲೆ, ವಿನೋಭಾ ಭಾವೆ ಮೊದಲಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹಲವರು ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಮಹಾದೇವ ಗೋವಿಂದ ರಾನಡೆ ಅವರ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದೆ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ದಾದಾ ಸಾಹೇಬ್‌ ಫಾಲ್ಕೆ, ದ.ರಾ.ಬೇಂದ್ರೆ, ವಿ.ಎನ್‌.ಗಾಡ್ಗೀಳ್‌ ಕೂಡಾ ಇದೇ ಸಮುದಾಯದವರು. ಸಮಾಜಕ್ಕೆ ಇವರ ಕೊಡುಗೆ ಏನು ಎಂಬುದು ಗೊತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.

ಇವೆಲ್ಲವನ್ನು ಅರಿಯದ ಕುಮಾರಸ್ವಾಮಿ ಅವರು ಪೇಶ್ವೆ ಬ್ರಾಹ್ಮಣ ಸಮುದಾಯವನ್ನು ಗುರಿ ಮಾಡಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಬ್ರಾಹ್ಮಣ, ಮಹಾರಾಷ್ಟ್ರ ಬ್ರಾಹ್ಮಣ ಎಂಬ ವಿಭಜಿಸಲು ಮುಂದಾಗಿರುವುದು ಸರಿಯಲ್ಲ. ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ರಘುನಾಥ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.