ADVERTISEMENT

ಅಂಧರಿಗೂ ಬಂತು ಬ್ರೈಲ್‌ ಲಿಪಿಯ ಎಪಿಕ್‌! ಎಲ್ಲ ಜಿಲ್ಲೆಗಳಲ್ಲೂ ಪ್ರಾಯೋಗಿಕ ವಿತರಣೆ

ಕೆ.ನರಸಿಂಹ ಮೂರ್ತಿ
Published 25 ಜನವರಿ 2019, 12:45 IST
Last Updated 25 ಜನವರಿ 2019, 12:45 IST
ಬ್ರೈಲ್‌ ಲಿಪಿಯಲ್ಲಿರುವ ಗುರುತಿನ ಚೀಟಿಯೊಂದಿಗೆ ಅಂಧ ಮತದಾರರಾದ ಎಂ.ಎಸ್‌.ಪೂಜಾ, ಎಂ.ಎಸ್‌.ಶ್ವೇತಾ, ಜೆ.ವನಜಾ, ಎ.ಜಿ.ರಾಘವೇಂದ್ರ, ಭುವನೇಶ್ವರಿ, ಸಿ.,ಮಲ್ಲಿಕಾ, ಎಂ.ಜ್ಯೋತಿ.
ಬ್ರೈಲ್‌ ಲಿಪಿಯಲ್ಲಿರುವ ಗುರುತಿನ ಚೀಟಿಯೊಂದಿಗೆ ಅಂಧ ಮತದಾರರಾದ ಎಂ.ಎಸ್‌.ಪೂಜಾ, ಎಂ.ಎಸ್‌.ಶ್ವೇತಾ, ಜೆ.ವನಜಾ, ಎ.ಜಿ.ರಾಘವೇಂದ್ರ, ಭುವನೇಶ್ವರಿ, ಸಿ.,ಮಲ್ಲಿಕಾ, ಎಂ.ಜ್ಯೋತಿ.   

ಬಳ್ಳಾರಿ: ಜಿಲ್ಲೆಯ 11 ಅಂಧರ ಬಳಿ ಈಗ ಬ್ರೈಲ್‌ ಲಿಪಿಯಲ್ಲಿರುವ ಮತದಾರರ ಗುರುತಿನ ಚೀಟಿ ಇದೆ! ಬರಲಿರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಈ ಚೀಟಿ ಬಳಸಿಯೇ ಮತದಾನ ಮಾಡಲಿರುವುದು ವಿಶೇಷ.

ಅಂಧರಿಗೆ ಅನುಕೂಲವಾಗುವಂಥ ಗುರುತಿನ ಚೀಟಿ ನೀಡುವ ಬಗ್ಗೆ ಹಿಂದಿನ ವರ್ಷ ಘೋಷಣೆ ಮಾಡಿದ್ದ ಚುನಾವಣಾ ಆಯೋಗವು ಕೆಲವರಿಗಷ್ಟೇ ಪ್ರಾತಿನಿಧಿಕವಾಗಿ ಚೀಟಿ ವಿತರಿಸಿತ್ತು.

ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸುಮಾರು 300 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ.

ADVERTISEMENT

ಇದುವರೆಗೂ ಅಂಧರು ತಮ್ಮ ಇದ್ದ ಸಾಮಾನ್ಯ ಮತದಾರರ ಗುರುತಿನ ಚೀಟಿ ಬಳಸಿ ಮತದಾನ ಮಾಡಿದ್ದರೂ, ತಮ್ಮದೇ ಎಂಬ ಬಗ್ಗೆ ಅವರಿಗೆ ಸ್ವತಃ ಖಾತರಿ ಇರಲಿಲ್ಲ.

ಆದರೆ ಈಗ ಅವರ ಬಳಿ ಇರುವ ಕಾರ್ಡ್‌ನಲ್ಲಿ ಹೆಸರು, ವಯಸ್ಸು, ವಿಳಾಸ ಸೇರಿದಂತೆ ಎಲ್ಲವೂ ಬ್ರೈಲ್‌ಲಿಪಿಯಲ್ಲೇ ಇರುವುದರಿಂದ, ಪ್ರತಿಯೊಂದು ಅಕ್ಷರವನ್ನೂ ಬೆರಳಿನಿಂದ ಮುಟ್ಟಿ ಓದಿಕೊಂಡು ಅದು ತಮ್ಮದೇ ಕಾರ್ಡ್‌ ಎಂಬ ಖುಷಿಯಲ್ಲಿದ್ದಾರೆ.

‘ಮೊದಲು ನನ್ನ ಬಳಿ ಗುರುತಿನ ಚೀಟಿ ಇತ್ತು. ಆದರೆ ಅದು ನನ್ನದೇ ಎಂದು ನನಗೆ ಅನುಭವಕ್ಕೆ ಬಂದಿರಲಿಲ್ಲ. ಈಗ ನೋಡಿ ಇದು ನನ್ನದೇ ಎಂದು ನಾನು ಓದಿ ತಿಳಿದುಕೊಳ್ಳಬಲ್ಲೆ’ ಎಂದು ಬಳ್ಳಾರಿ ತಾಲ್ಲೂಕಿ ಸಿರಿವಾರ ಗ್ರಾಮದ ಗುಡಿಸಲು ಗಂಗಣ್ಣ ‘ಪ್ರಜಾವಾಣಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದರು.

‘ಬ್ರೈಲ್‌ ಲಿಪಿಯಲ್ಲಿರುವ ಗುರುತಿನ ಚೀಟಿಯನ್ನು ನೀಡುವ ಮೂಲಕ ಚುನಾವಣೆ ಆಯೋಗವು ಅಂಧ ಮತದಾರರನ್ನು ವಿಶೇಷವಾಗಿ ಪರಿಗಣಿಸಿರುವುದು ಸ್ವಾಗತಾರ್ಹ. ರಾಜ್ಯದ ಎಲ್ಲ ಅಂಧ ಮತದಾರರಿಗೂ ಬ್ರೈಲ್‌ಲಿಪಿಯ ಗುರುತಿನ ಚೀಟಿ ವಿತರಿಸಬೇಕು’ ಎಂದು ಕೂಡ್ಲಿಗಿ ತಾಲ್ಲೂಕಿನ ಗೊಲ್ಲರಹಟ್ಟಿಯ ಎ.ಜಿ.ರಾಘವೇಂದ್ರ ಪ್ರತಿಪಾದಿಸಿದರು.

ಅವರೊಂದಿಗೆ, ಬಳ್ಳಾರಿ ನಗರದ ಎಂ.ಎಸ್‌.ಪೂಜಾ, ಎಂ.ಎಸ್‌.ಶ್ವೇತಾ, ಜೆ.ವನಜಾ, ಭುವನೇಶ್ವರಿ, ಸಿ.ಮಲ್ಲಿಕಾ, ಎಂ.ಜ್ಯೋತಿ ಚೀಟಿ ಪಡೆದರು.

’ಅಂಧ ಮತದಾರರ ಮಾಹಿತಿಯನ್ನು ಪಡೆದು ಅಂಗವಿಕಲರ ಕಲ್ಯಾಣ ಇಲಾಖೆಯ ನಿರ್ದೇಶನಾಲಯವು ಮೈಸೂರಿನ ಬ್ರೈಲ್‌ ಮುದ್ರಣಾಲಯದಲ್ಲಿ ಮುದ್ರಿಸಿ ಗುರುತಿನ ಚೀಟಿ ವಿತರಿಸಿದೆ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಮಹಾಂತೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.