ADVERTISEMENT

ಲಂಚ: ತುಮಕೂರಿನ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾಗೆ 4 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 13:10 IST
Last Updated 13 ಸೆಪ್ಟೆಂಬರ್ 2023, 13:10 IST
<div class="paragraphs"><p>ತಬಸುಮ್ ಜಹೇರಾ</p></div>

ತಬಸುಮ್ ಜಹೇರಾ

   

ತುಮಕೂರು: ಜಮೀನು ವಿವಾದ ಸಂಬಂಧ ಆದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉಪವಿಭಾಗಾಧಿಕಾರಿ ತಬಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹಮ್ಮದ್‌ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಪ್ರಸ್ತುತ ತಬಸುಮ್ ಜಹೇರಾ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ ಶಬ್ಬೀರ್ ಅಹಮ್ಮದ್ ತುಮಕೂರು ತಾಲ್ಲೂಕು ಬೆಳ್ಳಾವಿ ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ADVERTISEMENT

ಪ್ರಕರಣದ ಹಿನ್ನೆಲೆ

ತಮ್ಮ ತಂದೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಮತ್ತೆ ತಮ್ಮ ತಂದೆ ಹೆಸರಿಗೆ ದಾಖಲೆಗಳನ್ನು ವರ್ಗಾವಣೆ ಮಾಡಿಕೊಡುವಂತೆ ಕೋರಿ ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಅವರಗೆರೆ ಗ್ರಾಮದ ವಿ.ಟಿ.ಜಯರಾಮ್ ಎಂಬುವರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕಚೇರಿ ನೌಕರ ಶಬ್ಬೀರ್ ಅಹಮ್ಮದ್ ಜತೆ ಮಾತುಕತೆ ನಡೆಸುವಂತೆ ತಬಸುಮ್ ಜಹೇರಾ ಸೂಚಿಸಿದ್ದರು. ಅದರಂತೆ ಸಬ್ಬೀರ್ ಸಂಪರ್ಕಿಸಿದಾಗ ₹35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹15 ಸಾವಿರವನ್ನು ಶಬ್ಬೀರ್ ಇಟ್ಟುಕೊಂಡು, ₹20 ಸಾವಿರ ಹಣವನ್ನು ತಬಸುಮ್‌ಗೆ ಜಯರಾಮ್ ಮೂಲಕವೇ ಕೊಡಿಸಿದ್ದರು.

ಹಣ ಕೊಟ್ಟರೂ ಕೆಲಸ ಮಾಡಿಕೊಡದಿರುವ ಬಗ್ಗೆ ಕಚೇರಿಗೆ ಬಂದು ವಿಚಾರಿಸಿದರು. ಪದೇಪದೇ ಕಚೇರಿಗೆ ಅಲೆದಾಟ ನಡೆಸಿದರೂ ಕೆಲಸ ಮಾಡಿಕೊಟ್ಟಿರಲಿಲ್ಲ. ಶಬ್ಬೀರ್ ಮತ್ತೆ ₹25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಮಯದಲ್ಲಿ ತಬಸುಮ್ ಅವರನ್ನು ಭೇಟಿ ಮಾಡಿಸಿದ್ದು, ಅವರೂ ಸಹ ಇದೇ ಮಾತು ಹೇಳಿದ್ದರು. ಇಬ್ಬರ ನಡುವಿನ ಮಾತುಕತೆಯ ವಿವರಗಳು, ಮೊಬೈಲ್‌ ಸಂಭಾಷಣೆಯ ವಿವರಗಳನ್ನು ದಾಖಲಿಸಿಕೊಂಡು ಅಂದಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. 2017 ಮೇ 23ರಂದು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೊಬೈಲ್‌ನಲ್ಲಿ ದಾಖಲಾದ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಇಬ್ಬರಿಗೂ ತಲಾ ನಾಲ್ಕು ವರ್ಷ ಶಿಕ್ಷೆ, ₹20 ಸಾವಿರ ದಂಡ ವಿಧಿಸಿ ಆದೇಶಿಸಿದರು. ಲೋಕಾಯುಕ್ತರ ಪರವಾಗಿ ಆರ್.ಪಿ.ಪ್ರಕಾಶ್ ವಾದ ಮಂಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.